ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಜನ ಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಅರಿವು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಂದಿನ ವಿದ್ಯಾರ್ಥಿಗಳು ಮೋಜು ಮತ್ತು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಬೇಸರ ವ್ಯಕ್ತ ಪಡಿಸಿದರು.

ಅವರು ಸಮಿಪದ ಆಲೂರುಸಿದ್ದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಜನ ಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಮಹಾ ಭಾರತದಲ್ಲಿ ಶಕುನಿ ದುರ್ಯೋಧನನಿಗೆ ಸಲಹೆಗಾರನಾಗಿದ್ದ ಶಕುನಿಯ ಮಾತಿನಿಂದ ದುರ್ಯೋಧನ ನಾಶವಾದ ಅದೆ ರೀತಿ ಅರ್ಜುನನಿಗೆ ಕೃಷ್ಣ ಸಲಹೆಗಾರನಾಗಿದ್ದ ಕೃಷ್ಣನ ಶ್ರೇಷ್ಠತೆಯ ಮಾತಿನಿಂದ ಅರ್ಜುನ ಶ್ರೇಷ್ಟತೆ ಪಡೆದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಸಲಹೆ ಕೊಡುವಂತಹ ಸ್ನೇಹಿತರ ಸಹವಾಸ ಮಾಡುವ ಮೂಲಕ ಸಜ್ಜನರ ವಿಶ್ವಾಸಗಳಿಸಿ ತನ್ನ ಜೀವನ ಮತ್ತು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಬೇಕು ಎಂದರು. ಶಾಲೆ ಜ್ಞಾನ ದೇಗುಲವಾಗಿದ್ದು ಈ ಕಾರಣದಿಂದ ಹಿಂದೆ ಶಾಲಾ ಮುಂಭಾಗದಲ್ಲಿ ಕೈ ಮುಗಿದು ಒಳಗೆ ಬಾ ಎಂದು ಎಂದು ಬರೆಯುತ್ತಿದ್ದರು. ಆದರೆ ಇಂದು ತಂಬಾಕು ಮುಕ್ತ ಪ್ರದೇಶ ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎಂಬ ಫಲಕವನ್ನು ಹಾಕುತ್ತಿರುವುದು ನೋವಿನ ವಿಚಾರ. ಇದಕ್ಕೆ ಕಾರಣ ವಿದ್ಯಾರ್ಥಿಗಳ ದುಶ್ಚಟ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಾಸ್ಥ್ಯ ಸಂಕಲ್ಪದಂತಹ ಅರಿವು ಕಾರ್ಯಕ್ರಮಗಳಲ್ಲಿ ಪಾಲ್ಗೊಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮವನ್ನು ಪ.ಪೂ.ಕಾಲೇಜು ಪ್ರಾಂಶುಪಾಲ ಕೆ.ಎಂ.ಚಂದ್ರಶೇಖರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದಂತಹ ಅರಿವು ಮೂಡಿಸುವ ಕಾರ್ಯಕ್ರಮದ ಅಗತ್ಯ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಒಕ್ಕೂಟದ ಅಧ್ಯಕ್ಷೆ ಸುನಿತಾ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರುತಿ, ಶಿಕ್ಷಕಿಯರಾದ ದಿವ್ಯ, ಲತಾ ಉಪನ್ಯಾಸಕರಾದ ರಾಘವಿ ಜಗದೀಶ್, ವಿಶ್ವನಾಥ್, ಜೋಸ್ ಕ್ರಿಸ್ಟಫರ್, ನವ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ, ಮೇಲ್ವಿಚಾರಕಿ ಜಯಶ್ರೀ, ಮಂಜುಳಾ ಮುಂತಾದವರು ಹಾಜರಿದ್ದರು.