ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ನ. 29ರಂದು ಶನಿವಾರ ಸಂಜೆ 5:45ಕ್ಕೆ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಅದ್ಧೂರಿ ಸಾಂಸ್ಕೃತಿಕ ವೈಭವ ಜರುಗಲಿದೆ.
ಕಾರ್ಕಳ: ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ನ. 29ರಂದು ಶನಿವಾರ ಸಂಜೆ 5:45ಕ್ಕೆ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಅದ್ಧೂರಿ ಸಾಂಸ್ಕೃತಿಕ ವೈಭವ ಜರುಗಲಿದೆ. ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದು, ಸಮಾರಂಭಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನುಡಿಸಿರಿ–ವಿರಾಸತ್ ಘಟಕದ ಗೌರವಾಧ್ಯಕ್ಷ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದ ಕಾರ್ಕಳದ ಅಧ್ಯಕ್ಷ ವಿಜಯಶೆಟ್ಟಿ ಹೇಳಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವರ್ಷದ ನುಡಿಸಿರಿ–ವಿರಾಸತ್ ಸಾಂಸ್ಕೃತಿಕ ವೈಭವವನ್ನು ಕೀರ್ತಿಶೇಷ ಎಂ.ಕೆ. ವಿಜಯಕುಮಾರ್ ಅವರ ಸ್ಮರಣೆಗೆ ಅರ್ಪಿಸಲಾಗಿದೆ.ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರು ವಿವಿಧ ಭಾರತೀಯ ಕಲಾ ಪ್ರಕಾರಗಳ ಮನಮೋಹಕ ಪ್ರದರ್ಶನ ನೀಡಲಿದ್ದಾರೆ. ಯೋಗ ದೀಪಿಕಾ, ಅಷ್ಟಲಕ್ಷ್ಮಿ ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ ‘ಶಂಕರಾರ್ಧ ಶರೀರಿಣಿ’, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ‘ಹಿರಣ್ಯಾಕ್ಷ ವಧೆ’, ಬೊಂಬೆ ವಿನೋದಾವಳಿ ಸೇರಿದಂತೆ ಅನೇಕ ವೈವಿಧ್ಯಮಯ ಕಲಾರೂಪಗಳು ವೇದಿಕೆಯನ್ನು ರಂಗಿನಗೊಳಿಸಲಿವೆ.ಕಾರ್ಯಕ್ರಮವು ಆಳ್ವಾಸ್ ವಿದ್ಯಾರ್ಥಿಗಳ ಸಿಂಗಾರಿ ಮೇಳ ಪ್ಯೂಷನ್ ವಿನೋದಾವಳಿಯೊಂದಿಗೆ ಆರಂಭಗೊಳ್ಳಲಿದ್ದು, ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಲಿದೆ.ಪ್ರೇಕ್ಷಕರಿಗಾಗಿ 15,000ಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿರಲಿದೆ. ಸಾಂಸ್ಕೃತಿಕ ವೈಭವ ಕಾರ್ಕಳ ಸ್ವರಾಜ್ ಮೈದಾನದ ಎಂ. ರಾಮಚಂದ್ರ ವೇದಿಕೆಯಲ್ಲಿ ಜರುಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಪ್ರಸಾದ್ ಶೆಟ್ಟಿ, ಕಾರ್ಯಕ್ರಮದ ಸಂಘಟಕ ಅಂಬರೀಶ್ ಚಿಪ್ಳುಣ್ಕರ್, ಉಪನ್ಯಾಸಕಿ ಹನಾ ಮೂಡುಬಿದ್ರೆ, ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದ ಕೋಶಾಧಿಕಾರಿ ಎಸ್. ಪಾರ್ಶ್ವನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.