ಪ್ರಸ್ತುತ ಶಿಕ್ಷಕರಾಗಿ ಸೇವೆ ಸಲ್ಲಿಸುವವರೂ ಸಹ ಎರಡು ವರ್ಷದೊಳಗೆ ಟಿಇಟಿ ಪರೀಕ್ಷೆಯಲ್ಲಿ ಉತ್ತೀ ರ್ಣರಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಶಿಕ್ಷಕರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರು ಮನವಿ ಮಾಡಿದರು.

ಹಾವೇರಿ: ಪ್ರಸ್ತುತ ಶಿಕ್ಷಕರಾಗಿ ಸೇವೆ ಸಲ್ಲಿಸುವವರೂ ಸಹ ಎರಡು ವರ್ಷದೊಳಗೆ ಟಿಇಟಿ ಪರೀಕ್ಷೆಯಲ್ಲಿ ಉತ್ತೀ ರ್ಣರಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಶಿಕ್ಷಕರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರು ಮನವಿ ಮಾಡಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಸೆ.1ರಂದು ಸುಪ್ರೀಂಕೋರ್ಟ್ ಆದೇಶದಿಂದ ದೇಶದ 30 ಲಕ್ಷ ಶಿಕ್ಷಕರಿಗೆ ಆಘಾತವಾಗಿದೆ. ಸೇವೆಗೆ ಸೇರಿ ಹತ್ತಾರು ವರ್ಷ ಕಳೆದರೂ ಈಗ ಟಿಇಟಿ ಉತ್ತೀರ್ಣರಾಗಬೇಕೆಂಬ ನಿಯಮದಿಂದ ಶಿಕ್ಷಕರು ಆತಂಕದಲ್ಲಿದ್ದಾರೆ. ಈಗ ಟಿಇಟಿ ಪಾಸ್ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತಂದು ಶಿಕ್ಷಕರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಕರ ಈ ಸಮಸ್ಯೆ ಕುರಿತು ಚರ್ಚೆ ನಡೆಸಬೇಕು. ಸುಪ್ರೀಂಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ದೇಶದ ಎಲ್ಲಾ ಶಿಕ್ಷಕರು ಒಂದೆಡೆ ಸೇರಿ ತೀವ್ರವಾದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.ನಾವು ಕಾಲಕಾಲಕ್ಕೆ ಇದ್ದ ನಿಯಮಗಳನ್ವಯ ನೇಮಕಾತಿ ಹೊಂದಿದ್ದೇವೆ. ಸಿಇಟಿ ಪಾಸ್ ಆಗಿ ನೇಮಕರಾದವರೂ ಇದ್ದೇವೆ. ಈಗ ಟಿಇಟಿ ಪಾಸ್ ಆಗಬೇಕೆಂಬ ನಿಯಮದಿಂದಾಗಿ ನಾವೆಲ್ಲಾ ಅರ್ಹತೆ ಇಲ್ಲದೆಯೇ ಶಿಕ್ಷಕರಾಗಿದ್ದೇವಾ ಎಂಬ ಪ್ರಶ್ನೆ ಕಾಡುತ್ತಿದೆ. ಬೇರೆ ಇಲಾಖೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಮುಂಬಡ್ತಿಗಳು ಸಿಗುತ್ತವೆ. ಆದರೆ, ಶಿಕ್ಷಕರಿಗೆ ಮುಂಬಡ್ತಿ ಎಂಬುದು ಗಗನ ಕುಸುಮ. ಮುಖ್ಯಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಮುಂಬಡ್ತಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಧಾನ ಕಾರ್ಯದರ್ಶಿ ಬಸವರಾಜ ಚಲ್ಲಾಳ ಮಾತನಾಡಿ, ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1-7 ತರಗತಿವರೆಗೆ ಬೋಧನೆ ಮಾಡಲು ಅವಕಾಶ ನೀಡುವುದಾಗಿ ಸಚಿವ ಸಂಪುಟದಲ್ಲಿ ನಿರ್ಣಯಿಸಿದೆ. ಕೂಡಲೇ ಈ ಕುರಿತು ಆದೇಶ ಹೊರಡಿಸಬೇಕು ಎಂದರು. ಸಂಘಟನೆಯ ಸಹ ಕಾರ್ಯದರ್ಶಿ ಈರನಗೌಡ ಅಗಸಿಬಾಗಿಲ, ಶಿವಯೋಗಿ ಆಲದಕಟ್ಟಿ, ಮಕ್ಬುಲ್ ಲಿಂಗದಾಳ ಇತರರಿದ್ದರು.