ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಯನ್ನು ಮಕ್ಕಳಿಗೆ ಧಾರೆ ಎರೆಯಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಶಿಕ್ಷಕರಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಯನ್ನು ಮಕ್ಕಳಿಗೆ ಧಾರೆ ಎರೆಯಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಶಿಕ್ಷಕರಿಗೆ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖಾ ವತಿಯಿಂದ 25-26 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ, ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ಜೇಡಿಮಣ್ಣಿನಂತೆ. ಅವರನ್ನು ಶಿಕ್ಷಕರು ಮನಸ್ಸು ಮಾಡಿದರೆ ದೇವರರೂಪ ಕೊಟ್ಟು ಪೂಜಿಸುವಂತೆಯೂ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ತಾವು ಮಕ್ಕಳಿಂದಲೇ ಇಂದು ಉತ್ತಮ ಹುದ್ದೆ ಪಡೆದಿದ್ದೇವೆ. ಅವರೇ ನಮಗೆ ಅನ್ನದಾತರು ಎಂದು ಅರಿತು ಪ್ರಾಮಾಣಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ತಾವು ಭೋದಿಸುತ್ತಿರುವ ಮಕ್ಕಳು, ತಮ್ಮ ಮಕ್ಕಳೇ ಎಂದು ಭಾವಿಸಿ ಮಕ್ಕಳನ್ನು ತಯಾರು ಮಾಡಬೇಕೆಂದು ಹೇಳಿದರು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರಾಮಾಣಿಕವಾಗಿ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಶಿಕ್ಷಕರು ಮತ್ತು ತೀರ್ಪುಗಾರರಿಗೆ ಕಿವಿಮಾತು ಹೇಳಿದರು. ಶಾಸಕ ಎಂ.ಟಿ.ಕೃಷ್ಣಪ್ಪನವರು ಕಾರ್ಯಕ್ರಮಕ್ಕೆ ಬರುವ ವೇಳೆ ಮಾಚೇನಹಳ್ಳಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸೋಮನ ಕುಣಿತ ಮಾಡುವ ಮೂಲಕ ಶಾಸಕರನ್ನು ವೇದಿಕೆಯತ್ತ ಕರೆತಂದರು. ಮಕ್ಕಳ ಜಾನಪದ ಕಲೆಯನ್ನು ಕಂಡು ಶಾಸಕರು ಫಿದಾ ಆದರು. ಮಕ್ಕಳ ಪ್ರತಿಭೆಯನ್ನು ಮುಕ್ತ ಕಂಠದಿಂದ ಹೊಗಳಿದರು. ಬಿಇಓ ಸೋಮಶೇಖರ್ ಮಾತನಾಡಿ, ಗ್ರಾಮಾಂತರ ಮಕ್ಕಳಲ್ಲಿ ಜಾನಪದ ಸೊಗಡಿನ ಕಲೆಗಳಿವೆ. ಅವುಗಳನ್ನು ನೀರೆರೆದು ಪೋಷಿಸಿ ಮರದೆತ್ತರಕ್ಕೆ ಬೆಳೆಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರಿಗೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ಸುರೇಶ್, ಸಿದ್ದಪ್ಪ ನಾಗಪ್ಪ ವಾಲಿಕಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಷಣ್ಮುಖಪ್ಪ, ರಾಜಪ್ಪ, ಗುರುರಾಜ್, ಎಚ್.ಎಸ್.ನಾಗರಾಜು. ಮಧು, ರಂಗಸ್ವಾಮಿ, ಮನುಕುಮಾರ್, ಶೀಥಲ್, ರಂಗರಾಮಯ್ಯ, ಭವ್ಯ, ವಿವಿ ಶಾಲಾ ಪ್ರಾಂಶುಪಾಲೆ ವಿಜಯ ವಿಶ್ವೇಶ್ವರಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಂಜೇಗೌಡ, ಎಚ್.ಸುರೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಲಕ್ಷ್ಮಿ, ಸರಸ್ವತಿ, ಕೃಷ್ಣ, ಶಿವ, ಪಾರ್ವತಿ, ಶ್ರೀದೇವಿ, ಬೇಟಿ ಬಚಾವೋ. ಸಾಲುಮರದ ತಿಮ್ಮಕ್ಕ, ಸೋಮನ ಕುಣಿತ, ಶಾಕುಂತಲಾ ದೇವಿ, ಕಿತ್ತೂರು ರಾಣಿ ಚನ್ನಮ್ಮ, ಮೇರಿ ಮಾತೆ ಸೇರಿದಂತೆ ವಿವಿಧ ವೇಷಭೂಷಣಗಳನ್ನು ತೊಟ್ಟು ಮಕ್ಕಳು ವಿಜೃಂಭಿಸಿದವು. ನೋಡಲ್ ಅಧಿಕಾರಿ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.