ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನೂತನ ಅಧ್ಯಕ್ಷ ಪ್ರಸನ್ನ ಗಡದಾ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಭಾಗವಹಿಸಿದ್ದರು.

ಕೊಪ್ಪಳ: ಕೊಪ್ಪಳ ಬೆಳೆಯುತ್ತಿರುವ ನಗರವಾಗಿರುವುದರಿಂದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ನಗರದ ಸೌಂದರ್ಯ ಹೆಚ್ಚಿಸುವ ದಿಸೆಯಲ್ಲಿ ಕೊಪ್ಪಳ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ ಶ್ರಮಿಸಲಿ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನೂತನ ಅಧ್ಯಕ್ಷ ಪ್ರಸನ್ನ ಗಡದಾ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಪ್ಪಳ ರಾಜ್ಯದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರ ವ್ಯಾಪ್ತಿಯಲ್ಲಿ ಲೇಔಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ ಪ್ರತಿ ಏರಿಯಾದ ಪ್ರಮುಖ ವೃತ್ತಗಳಲ್ಲಿ ಸುಮಾರು ₹೨.೮೦ ಕೋಟಿ ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯಕ್ಕೂ ಒತ್ತೂ ನೀಡಿದೆ. ನಗರಾಭಿವೃದ್ಧಿ ಪ್ರಾಧಿಕಾರ ಇನ್ನು ಮುಂದೆ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದೆ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕೊಪ್ಪಳದ ರಸ್ತೆಗಳ ಅಭಿವೃದ್ಧಿಗೆ ₹೨೮ ಕೋಟಿ ಅನುದಾನ ಮೀಸಲಿಡಲಾಗಿದೆ. ನಗರದ ಸೌಂದರ್ಯೀಕರಣಕ್ಕೂ ವಿಶೇಷ ಒತ್ತು ನೀಡಲಾಗಿದೆ. ಹಿಂದಿನ ಅಧ್ಯಕ್ಷರಾಗಿದ್ದ ಜುಲ್ಲು ಖಾದ್ರಿ ಅವಧಿಯಿಂದ ಶ್ರೀನಿವಾಸ ಗುಪ್ತ ಅವರ ವರೆಗೂ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ನಗರದ ಪ್ರಮುಖ ವೃತ್ತಗಳ ಅಗಲೀಕರಣ ಮಾಡಬೇಕು. ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಪಘಾತ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಲೇಔಟ್‌ಗಳಲ್ಲಿ ಮರ ನೆಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ನಾಯಕತ್ವ ದೊರೆತಾಗ ಅದನ್ನು ಸದ್ವಿನಿಯೋಗ ಮಾಡಿಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.

ನಿರ್ಗಮಿತ ಪ್ರಾಧಿಕಾರದ ಅಧ್ಯಕ್ಷ ಅಧ್ಯಕ್ಷ ಶ್ರೀನಿವಾಸ ಗುಪ್ತ ಮಾತನಾಡಿ, ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲೆ ಕಮಲ ಸರೋವರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದರು.

ನೂತನ ಅಧ್ಯಕ್ಷ ಪ್ರಸನ್ನ ಗಡಾದ ಮಾತನಾಡಿ, ಕೊಪ್ಪಳ ನಗರಕ್ಕೆ ಸ್ವಚ್ಛ ಹಾಗೂ ಸುಂದರ ವಾತಾವರಣ ನಿರ್ಮಿಸುವುದು ನನ್ನ ಗುರಿ. ವಾಯುಮಾಲಿನ್ಯ ತಡೆಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಸ್ವಾಗತಿಸಿದರು. ಮುಖಂಡರಾದ ಅಮ್ಜದ್ ಪಟೇಲ್, ಕಾಟನ್ ಪಾಷಾ, ಕೃಷ್ಣಾರಡ್ಡಿ ಗಲಬಿ, ಲತಾ ಚಿನ್ನೂರು, ಜ್ಯೋತಿ ಗೊಂಡಬಾಳ, ಕೆ.ಎಂ. ಸೈಯದ್, ರೇಷ್ಮಾ ಖಾಜಾವಲಿ, ರಾಮಣ್ಣ ಚೌಡ್ಕಿ, ವಿ.ಆರ್. ಪಾಟೀಲ್, ಅಜ್ಜಪ್ಪ ಸ್ವಾಮಿ, ಪಾಷಾ ಖರೀಬ್, ಮಾರ್ಕಂಡಪ್ಪ ಕಲ್ಲಣ್ಣನವರ, ರಮೇಶ್ ಹ್ಯಾಟಿ, ಯಮನೂರಪ್ಪ ಕಬ್ಬೇರ, ತೋಟಪ್ಪ ಕಾಮನೂರು, ಮಾಲತಿ ನಾಯಕ್ ಇದ್ದರು.