ಕಾರ್ಖಾನೆಯ ತ್ಯಾಜ್ಯ ಮತ್ತು ಹಾರುಬೂದಿಯಿಂದ ರೋಸಿ ಹೋಗಿರುವ ಹಿರೇಬಗನಾಳ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕಾರ್ಖಾನೆಗಳ ವಿರುದ್ಧ ಸಿಡಿದೆದ್ದು ಸಭೆ ನಡೆಸಿದ್ದಾರೆ. ಅಲ್ಲದೇ ತ್ಯಾಜ್ಯ ನಿಯಂತ್ರಣ ಮಾಡಿ, ಇಲ್ಲವೇ ಕಾರ್ಖಾನೆ ಬಂದ್ ಮಾಡಿ ಎಂದು ಕಾರ್ಖಾನೆಯ ಪ್ರತಿನಿಧಿಗಳಿಗೆ ತಾಕೀತು ಮಾಡಿದ್ದಾರೆ.

ಕೊಪ್ಪಳ: ಕಾರ್ಖಾನೆಯ ತ್ಯಾಜ್ಯ ಮತ್ತು ಹಾರುಬೂದಿಯಿಂದ ರೋಸಿ ಹೋಗಿರುವ ಹಿರೇಬಗನಾಳ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕಾರ್ಖಾನೆಗಳ ವಿರುದ್ಧ ಸಿಡಿದೆದ್ದು ಸಭೆ ನಡೆಸಿದ್ದಾರೆ. ಅಲ್ಲದೇ ತ್ಯಾಜ್ಯ ನಿಯಂತ್ರಣ ಮಾಡಿ, ಇಲ್ಲವೇ ಕಾರ್ಖಾನೆ ಬಂದ್ ಮಾಡಿ ಎಂದು ಕಾರ್ಖಾನೆಯ ಪ್ರತಿನಿಧಿಗಳಿಗೆ ತಾಕೀತು ಮಾಡಿದ್ದಾರೆ.

ಹಿರೇಬಗನಾಳ ಗ್ರಾಮದ ಕರಿಯಮ್ಮನ ದೇವಸ್ಥಾನದಲ್ಲಿ ಸಭೆ ಸೇರಿದ್ದ ಗ್ರಾಮಸ್ಥರು, ಗ್ರಾಮದ ಸುತ್ತಲು ತನುಸ್ ಇಸ್ಪಾತ್, ವನ್ಯ ಸ್ಟೀಲ್, ತ್ರಿವಿಸ್ಟಾರ್, ಎಚ್.ಆರ್. ಜಿ. ಎಸ್.ವಿ. ಇಸ್ಪಾತ್ ಸೇರಿದಂತೆ ಅನೇಕ ಕಾರ್ಖಾನೆಗಳ ಪ್ರತಿನಿಧಿಗಳನ್ನು ಕರೆಯಿಸಿ, ಗ್ರಾಮವನ್ನು ಸುತ್ತಾಡಿಸಿದ್ದಾರೆ. ಶಾಲೆ, ಗುಡಿಗಳನ್ನು ಮತ್ತು ಮನೆಗಳನ್ನು ಸುತ್ತಾಡಿ, ಕರಿಬೂದಿಯನ್ನು ಅವರ ಕೈಗೆ ಅಂಟಿಸಿ ತೋರಿಸಿದ್ದಾರೆ. ಗೋಡೆಗಳಿಗೆ ಕಾರ್ಖಾನೆಯ ಪ್ರತಿನಿಧಿಗಳ ಕೈ ಇಟ್ಟು ಎಳೆಸಿ, ಅದರಿಂದ ಕೈ ಕಪ್ಪಾಗಿದ್ದನ್ನು ತೋರಿಸಿ, ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಳಿಕ ಗ್ರಾಮದೇವತೆಯ ದೇವಸ್ಥಾನದಲ್ಲಿ ಸಭೆ ಸೇರಿ, ನಮ್ಮೂರಿನಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಇಲ್ಲಿ ಬದುಕುವುದು ಅಸಾಧ್ಯವಾಗಿದೆ. ಕಾರ್ಖಾನೆಯ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಹಾಗೆ ಬಿಡುತ್ತಿರುವುದರಿಂದ ಅದು ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲೆಲ್ಲ ಹರಡುತ್ತಿದೆ. ಇದರಿಂದ ಬೆಳೆಗಳು ಬೆಳೆಯುತ್ತಿಲ್ಲ, ನಮಗೆ ಉಸಿರಾಡಲು ಆಗುತ್ತಿಲ್ಲ. ಹಲವು ಬಗೆಯ ರೋಗಗಳು ಬರುತ್ತಿವೆ. ಆದ್ದರಿಂದ ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ, ಇಲ್ಲವೇ ಕಾರ್ಖಾನೆಯನ್ನೇ ಬಂದ್ ಮಾಡಿ ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆ ಪ್ರತಿನಿಧಿಗಳು, ಆರು ತಿಂಗಳ ಸಮಯಾವಕಾಶ ಕೇಳಿದರು. ಅದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಇಂಥ ಸಮಯ ಸಾಧಕತೆ ಬೇಡ. ಈ ಹಿಂದೆ ಹಲವಾರು ಬಾರಿ ನಾವು ಮನವಿ ಸಲ್ಲಿಸಿದ್ದೇವೆ. ನೀವು ಯಾಕೆ ಕ್ರಮವಹಿಸಿಲ್ಲ? ಈಗ ನಾವು ಸಭೆ ಕರೆದ ಮೇಲೆ ಸಮಯ ಕೇಳುವುದು ಯಾವ ನ್ಯಾಯ? ಹಾಗಾದರೆ ಮೊದಲು ಕಾರ್ಖಾನೆ ಬಂದ್ ಮಾಡಿ, ತ್ಯಾಜ್ಯ ನಿಯಂತ್ರಣ ಮಾಡಿ, ಆನಂತರ ಪ್ರಾರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಪ್ರತಿನಿಧಿಗಳನ್ನು ಗ್ರಾಮದ ಹಿರಿಯರು, ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮಿಂದ ನಾವು ನರಕದಲ್ಲಿ ಬದುಕುವಂತೆ ಆಗಿದೆ. ನಿಮಗೆ ಕನಿಷ್ಠ ಕಾಳಜಿಯೂ ಇಲ್ಲ. ನಾವು ಇಲ್ಲಿ ಬದುಕಲು ಆಗದಂತೆ ಆಗಿದೆ. ಹೀಗಾಗಿ, ನೀವು ಬಂದ್ ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಹೊರಸೂಸುವ ತ್ಯಾಜ್ಯ ನಿಯಂತ್ರಣ ಮಾಡಬೇಕು, ಇಲ್ಲದಿದ್ದರೆ ಕಾರ್ಖಾನೆಯನ್ನೇ ಬಂದ್ ಮಾಡಬೇಕು ಎನ್ನುವ ಷರತ್ತು ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ವಿಧಿಸಿ, ಸಭೆಯನ್ನು ಮೊಟಕುಗೊಳಿಸಲಾಯಿತು.

ಮದ್ದಾನಯ್ಯ ಹಿರೇಮಠ, ಹನುಮಗೌಡ್ರ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ ಸ್ವಾಮಿ, ರವಿ ದೇವರಮನಿ, ಗವಿಸಿದ್ದಪ್ಪ ವದಗನಾಳ, ಗವಿಸಿದ್ದಪ್ಪ ಪುಟಿಗಿ, ಗಣೇಶ ಬಡಿಗೇರ, ಮಹೇಶ ವದಗನಾಳ ಇದ್ದರು.

ಸದ್ಯಕ್ಕೆ ಸಭೆ ಸೇರಿ, ಅವರಿಗೆ ತಾಕೀತು ಮಾಡಿದ್ದೇವೆ. ಬಳಿಕ ಕಾರ್ಖಾನೆಯವರು ಧೂಳು ಪ್ರಮಾಣ ನಿಯಂತ್ರಣ ಮಾಡಿದ್ದಾರೆ. ಮತ್ತೆ ಧೂಳು ಹಾಗೆ ಬಿಟ್ಟಿದ್ದೇ ಆದರೆ ನಾವು ಕಾರ್ಖಾನೆಯನ್ನೇ ಬಂದ್ ಮಾಡಿಸುತ್ತೇವೆ ಎಂದು ರೈತ ಹೋರಾಟಗಾರ ಮದ್ದಾನಯ್ಯ ಹಿರೇಮಠ ಹೇಳಿದರು.