ಸಾರಾಂಶ
ನರೇಗಲ್ಲ: 112 ವರ್ಷಗಳ ಹಿಂದೆ ಈ ನೆಲದಲ್ಲಿ ನಡೆದಾಡಿ ಸಮಾಜಕ್ಕೆ ತಮ್ಮದೇ ಆದ ಛಾಪು ಮೂಡಿಸಿ ನಾಡಿನ ಜನತೆಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವರು ಅನ್ನದಾನ ಶ್ರೀಗಳು ಎಂದು ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಜಿ.ಜಿ.ಹಿರೇಮಠ ಹೇಳಿದರು.
ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಮಠದ ಜಾತ್ರಾಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ರಿಕಾಲ ಪೂಜಾ ನಿಷ್ಠರಾಗಿ, ಈ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತ ಸಮಾಜದ ಅಂಕುಡೊಂಕು ತಿದ್ದುತ್ತಾ ಪೂಜಾ ನಿಷ್ಠ ಪರಂಪರೆಗೆ ಮುನ್ನುಡಿ ಹಾಕುವದರ ಜತೆಗೆ ಹಾಲಕೆರೆಗೆ ತಮ್ಮ ಅಪಾರ ಕೊಡುಗೆ ಸಲ್ಲಿಸಿದವರು ಅನ್ನದಾನ ಶ್ರೀಗಳು ಎಂದರು.ಎಲ್ಲ ಭಕ್ತರ ಬದುಕನ್ನು ಸಮೃದ್ಧಿ ಮಾಡಿದ ಶ್ರೆಯಸ್ಸು ಈರ್ವರು ಶ್ರೀಗಳಿಗೆ ಸಲ್ಲುತ್ತದೆ. ಅಭಿನವ ಅನ್ನದಾನ ಶ್ರೀಗಳು ಇಡೀ ಜಂಗಮತ್ವಕ್ಕೆ ಮಾರ್ಗದರ್ಶಿಯಾದಂತವರು. ಜ್ಯೋತಿ ತನ್ನನ್ನು ತಾನು ಸುಟ್ಟುಕೊಂಡು ತಾನು ಕರಗುವ ಮುನ್ನ ತನ್ನಂತ ಹಲವಾರು ದೀಪಗಳಿಗೆ ಬೆಳಗುವ ಶಕ್ತಿ ನೀಡುವುದರ ಜತೆಗೆ ತನ್ನ ಶಕ್ತಿ ಕುಗ್ಗದಂತೆ ಇತರ ದೀಪಗಳ ಶಕ್ತಿಯೂ ಕುಗ್ಗದಂತೆ ತಾನು ಬೆಳಗಿದಂತೆ ಮತ್ತೊಂದು ಜ್ಯೋತಿಯು ಬೆಳಗಲಿ ಎನ್ನುವಂತ ಭಾವದಲ್ಲಿ ಈ ಮಠದ ಪರಂಪರೆ ಮುನ್ನಡೆಯುತ್ತಿದೆ. ಈ ಮಠದಲ್ಲಿ ಪ್ರತಿಯೊಬ್ಬ ಶ್ರೀಗಳು ತಪೋನಿಷ್ಟರಾಗಿ ತಮ್ಮ ಕಾರ್ಯ ಮಾಡಿರುವುದು ಕಂಡುಬರುತ್ತದೆ ಎಂದರು.
ಅಭಿನವ ಅನ್ನದಾನ ಸ್ವಾಮಿಗಳು ಹಾಲಕೆರೆ ಹೊಸಪೇಟೆ, ಶಿವಯೋಗಮಂದಿರ ಹೀಗೆ ತ್ರಿಕೋನಾಕಾರದಲ್ಲಿ ಸಂಚರಿಸುತ್ತಾ ಹೊಸತನ ಜನತೆಗೆ ನೀಡುತ್ತಾ ಅಸಾಮಾನ್ಯ ಕಾರ್ಯ ಕೈಗೊಳ್ಳುತ್ತಾ ಅಭೂತಪೂರ್ವ ಕಾರ್ಯಕ್ರಮ ಕೈಗೊಳ್ಳುತ್ತಿದ್ದ ಮಹಾನ್ ವ್ಯಕ್ತಿಗಳು, ಸಾವಯಕ ಕೃಷಿಗಾಗಿ ಉಳವಿ ಯಾತ್ರೆ, ಜೈವಿಕ ಇಂಧನ, ಸಾವಿರಾರು ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ, ಮಹಿಳೆಯರಿಗೆ ಆದ್ಯತೆ ನೀಡಲು ಬೆಳ್ಳಿ ರಥೋತ್ಸವ ಮಾಡುವ ಮೂಲಕ ನಾಡಿನಲ್ಲಿಯೇ ವೈಶಿಷ್ಟತೆ ಹೊಂದಿದವರು. ಇಂತಹ ಮಹಾನ್ ಸಾಧಕರನ್ನು ನಾವು ಕಳೆದುಕೊಂಡು ಮೂರು ವರ್ಷಗಳು ಗತಿಸಿದ್ದರೂ ಅವರು ನಮ್ಮ ನಿಮ್ಮೇಲ್ಲರ ಮನದಾಳದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದರು.ಈ ವೇಳೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮಿಗಳು ಆಶಿರ್ವಚನ ನೀಡಿದರು. ನರೇಗಲ್ಲಿನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಕಡ್ಲಿಮಟ್ಟಿ ಕಾಶಿಬಾಯಿ ನಾಟಕ ಪ್ರದರ್ಶನಗೊಂಡಿತು.
ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮಿಗಳು, ನಂದವಾಡಗಿ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ನಿಡಗುಂದಿ ಕೊಪ್ಪದ ಶಾಖಾಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮಿಗಳು, ವನಬಳ್ಳಾರಿಯ ಬಸವಲಿಂಗ ಸ್ವಾಮಿಗಳು, ದರೂರಿನ ಸಂಗನಬಸವೇಶ್ವರ ಮಠದ ಕೊಟ್ಟೂರು ದೇಶಿಕರು, ಶ್ರೀಧರಗಡ್ಡೆ ಮಠದ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಬೂದಗುಂಪಾ ಮಠದ ಸಿದ್ದೇಶ್ವರ ದೇಶಿಕರು, ಸಂಗನಹಾಲ ಮಠದ ವಿಶ್ವೇಶ್ವರ ದೇವರು ಇದ್ದರು.ಕನ್ನಡ ಪ್ರಾದ್ಯಾಪಕ ಕಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಮುತ್ತಣ್ಣ ಹೊನವಾಡ ವಂದಿಸಿದರು.