ಸಾರಾಂಶ
ಸಾಲು ಮರದ ತಿಮ್ಮಕ್ಕ ರಸ್ತೆಯುದ್ದಕ್ಕೂ ಮರ ಬೆಳೆಸುವ ಮೂಲಕ ಅಲ್ಲಿ ತಿರುಗಾಡುವ ಎಲ್ಲರಿಗೂ ನೆರಳನ್ನು ನೀಡಿದ ಮಹನೀಯರಾಗಿದ್ದಾರೆ
ನರೇಗಲ್ಲ: ಪರಿಸರ ಸಂರಕ್ಷಣೆಯೇ ನನ್ನ ಮೂಲಮಂತ್ರ ಎಂದು ತಮ್ಮ ಜೀವನದುದ್ದಕ್ಕೂ ಸಾವಿರ ಸಾಲುಗಳ ಮರ ಬೆಳೆಸಿ ರಕ್ಷಿಸಿ ಪಾಲನೆ ಪೋಷಣೆ ಮಾಡಿದ ಸಾಧನೆ ಅಸಾಧಾರಣವಾದದ್ದು ಎಂದು ಮುಖ್ಯ ಶಿಕ್ಷಕ ಬಸವರಾಜ ದೇಸಾಯಿಪಟ್ಟಿ ಹೇಳಿದರು.
ಸಮೀಪದ ಬೂದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆಯ 1ರಿಂದ 7ನೆ ತರಗತಿಯ ಮಕ್ಕಳನ್ನು ರಾಷ್ಟ್ರೀಯ ಹಸಿರು ಪಡೆ ಸಾಲುಮರದ ತಿಮ್ಮಕ್ಕನ ಇಕೋ ಕ್ಲಬ್ ವತಿಯಿಂದ ವನಭೋಜನ ಹಾಗೂ ಕ್ಷೇತ್ರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮಾತನಾಡಿದರು.ಸಾಲು ಮರದ ತಿಮ್ಮಕ್ಕ ರಸ್ತೆಯುದ್ದಕ್ಕೂ ಮರ ಬೆಳೆಸುವ ಮೂಲಕ ಅಲ್ಲಿ ತಿರುಗಾಡುವ ಎಲ್ಲರಿಗೂ ನೆರಳನ್ನು ನೀಡಿದ ಮಹನೀಯರಾಗಿದ್ದಾರೆ. ನಾವು ಎಷ್ಟು ಹೆಚ್ಚು ಗಿಡ ಬೆಳೆಸುತ್ತೇವೆಯೋ ಆದರಿಂದ ಉತ್ತಮ ಮಳೆ ಪಡೆಯಲು ಸಾಧ್ಯ.ಆದ್ದರಿಂದ ಅವಕಾಶ ಸಿಕ್ಕಾಗಲೆಲ್ಲ ನೀವು ಸಹ ಸಸಿಗಳನ್ನು ನೆಟ್ಟು ಜವಾಬ್ದಾರಿಯಿಂದ ಪೋಷಿಸಬೇಕೆಂದು ತಿಳಿಸಿದರು.
ಶಿಕ್ಷಕ ಸಿ.ಕೆ. ಕೇಸರಿ ಮಾತನಾಡಿದರು. ಶಾಲೆಯ 77 ಜನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರದ ಬಗೆಗಿನ ಮಾಹಿತಿ ಪಡೆದುಕೊಂಡರು. ಐಶ್ವರ್ಯ ಬಿಂಗಿ, ಪಗ್ವಿನ್ ಮುಲ್ಲಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಗೌಡ ಭರಮಗೌಡ, ಚನ್ನಬಸಪ್ಪ ಮರಲಿಂಗನವರ, ಅಶೋಕ ಚಿಗರಿ, ದೊಡ್ಡನಗೌಡ ದೇಸಾಯಿಗೌಡ್ರ ಸೇರಿದಂತೆ ಇತರರು ಇದ್ದರು.