ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಏರಿಕೆ
ಕನ್ನಡಪ್ರಭ ವಾರ್ತೆ ಹುಣಸೂರು ತಂಬಾಕಿಗೆ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ದರ ಏರಿಕೆಯನ್ನು ವಿರೋಧಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಖರೀದಿ ಕಂಪನಿಗಳ ನಿರ್ಧಾರದಿಂದ ಮಾರುಕಟ್ಟೆ ಬಂದ್ ಆಗಿರುವ ಹಿನ್ನೆಲೆ ರೈತರ ಹಿತ ಕಾಯುವ ನಿಟ್ಟಿನಲ್ಲಿ ರೈತ ಸಂಘವು ಮೂರು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ.ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಗಲಾಪುರ ನಾಗೇಂದ್ರ ಮಾತನಾಡಿ, ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಏರಿಕೆಯ ಹಿನ್ನಲೆಯಲ್ಲಿ ತಂಬಾಕು ಖರೀದಿ ಕಂಪನಿಗಳು ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿವೆ.ಇದರಿಂದಾಗಿ ಮಾರುಕಟ್ಟೆ ಬಂದ್ ಆಗಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕು ಒಣಗುತ್ತಿದೆ. ದಿನದಿನಕ್ಕೂ ಬೆಲೆ ಕಳೆದುಕೊಳ್ಳುತ್ತಿದೆ. ಇದ್ದಕ್ಕಿದ್ದಂತೆ ದಿಢೀರನೆ ಹರಾಜು ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ (ಫೆ. 2ರವರೆಗೆ) ಭಾಗವಹಿಸುವುದಿಲ್ಲವೆಂದು ಇಂಡಿಯನ್ ಟೊಬ್ಯಾಕೋ ಅಸೋಸಿಯೇಷನ್ ನಿರ್ಧರಿಸಿರುವುದು ಖಂಡನೀಯ.ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.ಮೊದಲಾಗಿ ತಂಬಾಕು ಹರಾಜು ಮಾರುಕಟ್ಟೆಯನ್ನು ಶೀಘ್ರ ತೆರೆದು ರಾಜ್ಯದಲ್ಲಿ ಮಿಕ್ಕಿರುವ 45 ಮಿಲಿಯನ್ ಕೆಜಿಯಷ್ಟ ತಂಬಾಕನ್ನು ಮಾರಾಟವಾಗುವಂತೆ ಮಂಡಳಿ ಕ್ರಮವಹಿಸಬೇಕು. ಎರಡನೇಯದಾಗಿ ಮಾರುಕಟ್ಟೆ ಆರಂಭಕ್ಕೂ ಮುನ್ನಾ ಪ್ರಸ್ತುತ ತಂಬಾಕು ಬೆಳೆಯ ಪರಿಸ್ಥಿತಿ, ರೈತರ ಹಿತ ಎರಡನ್ನು ಗಮನದಲ್ಲಿಟ್ಟುಕೊಂಡು ಮಂಡಳಿ ರೈತರ ಸಭೆ ಆಯೋಜಿಸಿ ಮಾಹಿತಿ ಪಡೆಯಬೇಕು.ಮೂರನೇಯದಾಗಿ ಮುಂದಿನ ಸಾಲಿಗಾಗಿ ಮಂಡಳಿಯೂ ಈಗಾಗಲೇ ಬಿತ್ತಬೀಜ ವಿತರಣೆ ಮತ್ತು ರಸಗೊಬ್ಬರಕ್ಕಾಗಿ ಮುಂಗಡ ಹಣ ವಸೂಲು ಮಾಡುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಜಾರಿಗೊಳಿಸಲು ಕೋರಿ ಜಿಲ್ಲಾಧಿಕಾರಿಗಳು ಮತ್ತು ತಂಬಾಕು ಮಂಡಳಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಖರೀದಿ ಕಂಪನಿಗಳು ಮತ್ತು ಸರ್ಕಾರದ ನಡುವಿನ ಜಿದ್ದಾಜಿದ್ದಿಗೆ ರೈತರು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ತಂಬಾಕು ನಿಷೇಧಗೊಳಿಸಲು ನಿರ್ಧರಿಸಿದರೆ ಅದಕ್ಕೆ ನಮ್ಮ ಸಹಮತವಿದೆ. ತಂಬಾಕು ಬೆಳೆಗಾರರಿಗೆ ಒನ್ ಟೈಮ್ ಸೆಟಲ್ ಮೆಂಟ್ ಆದಾರದಡಿ ಬ್ಯಾರನ್‌ಗೆ 30 ಲಕ್ಷ ರು.ಗಳ ಪರಿಹಾರದ ಪ್ಯಾಕೇಜ್ ಘೋಷಿಸಿ ನೀಡಲಿ. ನಾವುಗಳು ಪರ್ಯಾಯಬೆಳೆಯತ್ತ ಮುಖ ಮಾಡುತ್ತೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕು ಮಂಡಳಿ ಖರೀದಿ ಕಂಪನಿಗಳ ನಿರ್ಧಾರವನ್ನು ಪ್ರಶ್ನಿಸುತ್ತಿಲ್ಲವೇಕೆ? ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿಕೊಳ್ಳುವುದನ್ನು ಬಿಟ್ಟು ಮಾರುಕಟ್ಟೆ ಬಂದ್ ಮಾಡುವ ಮೂಲಕ ರೈತರ ಬದುಕಿಗೆ ಕೊಳ್ಳಿ ಇಡುವುದು ಸರಿಯೇ? ಮಂಡಳಿ ರೈತಪರ ನಿಲುವು ತೆಗೆದುಕೊಳ್ಳಬೇಕಲ್ಲವೇ? ರಾಜ್ಯ ಸರ್ಕಾರ ಇದಕ್ಕೂ ತನಗೂ ಸಂಬಂಧವಿಲ್ಲವೆನ್ನುವ ಧೋರಣೆಯನ್ನು ಮೊದಲು ಕೈಬಿಡಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಚಂದ್ರೇಗೌಡ, ಚನ್ನೇಗೌಡ, ಶಿವಣ್ಣ, ಮಹದೇವಸ್ವಾಮಿ, ರಮೇಶ್, ರವಿ, ಪಿರಿಯಾಪಟ್ಟಣದ ಎಪಿಎಂಸಿ ಮಾಜಿ ಅಧ್ಯಕ್ಷ ದಶರಥ, ಎಚ್.ಡಿ. ಕೋಟೆ ಮಹದೇವಸ್ವಾಮಿ, ಕಾಪ್ ಸಮಿತಿ ಸದಸ್ಯ ಪೃಥ್ವಿ, ಬಿ.ಎನ್. ನಾಗರಾಜಪ್ಪ ಮಾತನಾಡಿದರು.ಅತ್ತಿಕುಪ್ಪೆ ರಾಮಕೃಷ್ಣ, ಧನಂಜಯ್, ಸತೀಶ್ ಅಗ್ರಹಾರ, ಶಿವಶಂಕರ್, ವಿಷಕಂಠಪ್ಪ, ದೇವರಾಜ್, ಪರಮೇಶ್, ನಿಂಗೇಗೌಡ ಇದ್ದರು.