ಕುವೆಂಪು ಅವರ ನಿವಾಸ ಉದಯರವಿ, ಅವರು ಬಳಸುತ್ತಿದ್ದ ವಸ್ತುಗಳು, ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮರಣಿಕೆಯನ್ನು ಇರುವ ಸ್ಥಿತಿಯಲ್ಲಿಯೇ ಉಳಿಸಿಕೊಂಡು, ರಾಷ್ಟ್ರೀಯ ಸ್ಮಾರಕವನ್ನಾಗಿ ರೂಪಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಉದಯರವಿ ನಿವಾಸವನ್ನು ರಾಷ್ಟ್ರಕವಿ ಕುವೆಂಪು ಅವರ ರಾಷ್ಟ್ರೀಯ ಸ್ಮಾರಕವನ್ನಾಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉದಯರವಿ ಕುವೆಂಪು ಸ್ಮಾರಕ ಹೋರಾಟ ಸಮಿತಿ ಒತ್ತಾಯಿಸಿತು.ವಿಜಯನಗರ 2ನೇ ಹಂತದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಬುಧವಾರ ಸಮಿತಿ ವತಿಯಿಂದ ಆಯೋಜಿಸಿದ್ದ ಚಿಂತಕರ ಚಿಂತನಾ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಹೋರಾಟಗಾರರು, ಹಿರಿಯ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಕುವೆಂಪು ಅವರ ಅಭಿವಾನಿಗಳು, ಅನುಯಾಯಿಗಳು, ಕನ್ನಡ ಪ್ರೇಮಿಗಳು ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಯಿತು.ಕುವೆಂಪು ಅವರ ನಿವಾಸ ಉದಯರವಿ, ಅವರು ಬಳಸುತ್ತಿದ್ದ ವಸ್ತುಗಳು, ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮರಣಿಕೆಯನ್ನು ಇರುವ ಸ್ಥಿತಿಯಲ್ಲಿಯೇ ಉಳಿಸಿಕೊಂಡು, ರಾಷ್ಟ್ರೀಯ ಸ್ಮಾರಕವನ್ನಾಗಿ ರೂಪಿಸಬೇಕು. ಕುಟುಂಬದವರಿಂದ ಮನೆಯನ್ನು ಖರೀದಿಸಿ ಅವರಿಗೆ ಅದಕ್ಕೆ ಪರ್ಯಾಯವಾಗಿ ನಗರದ ಕೇಂದ್ರ ಭಾಗದಲ್ಲಿಯೇ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು. ಈ ನಿರ್ಧಾರವನ್ನು ಸರ್ಕಾರ ಈ ಬಜೆಟ್‌ ನಲ್ಲಿಯೇ ಘೋಷಿಸಬೇಕು ಎಂಬ ಬೇಡಿಕೆ ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.ರಾಷ್ಟ್ರಕವಿ ಕುವೆಂಪು ಅವರ ಮೈಸೂರು ನಿವಾಸವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ರಾಜ್ಯ ಸರ್ಕಾರ ಮುಂಬರುವ ಬಜೆಟ್‌ ನಲ್ಲಿ ಹಣ ಮೀಸಲಿಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಬೃಹತ್ ಹೋರಾಟ ಕೈಗೊಳ್ಳಲು ಸಮಿತಿ ತೀರ್ಮಾನಿಸಿತು.ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಲಾಗುವುದು. ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಮಿತಿ ವತಿಯಿಂದ ಪ್ರವಾಸ ಕೈಗೊಂಡು ಕುವೆಂಪು ಅವರ ಅಭಿವಾನಿಗಳು, ಹೋರಾಟಗಾರರು, ಸಾಹಿತಿಗಳು, ಕನ್ನಡ ಅಭಿವಾನಿಗಳನ್ನು ಒಟ್ಟಾಗಿ ಸೇರಿಸಿ ರಾಜ್ಯಾದ್ಯಂತ ಬೃಹತ್ ಹೋರಾಟ ರೂಪಿಸಲು ಸಮಿತಿ ನಿರ್ಧರಿಸಿತು.ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಕುವೆಂಪು ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂಬುದು ನಾಡಿನ ಜನರ ಆಶಯ. ಆದರೆ, ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇಲ್ಲ. ಬೇರೆ ರಾಜ್ಯಗಳಲ್ಲಿ ಸಾಹಿತಿಗಳನ್ನು ಗೌರವಾಭಿವಾನದಿಂದ ನಡೆಸಿಕೊಳ್ಳುತ್ತಾರೆ. ನಮ್ಮಲ್ಲಿ ಅಂತಹ ಅಭಿಮಾನ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ಚರ್ಚಿಸಬೇಕಿದೆ ಎಂದರು.ಸಮಿತಿ ಅಧ್ಯಕ್ಷ ಮೋಹನಕುಮಾರ್ ಗೌಡ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಯುವ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನೆಲ ರಾಮ್‌ ಪ್ರಸಾದ್, ಕರ್ನಾಟಕ ಕ್ರಾಂತಿರಂಗ ಅಧ್ಯಕ್ಷ ಡಾ. ಮಂಚೇಗೌಡ, ಕರ್ನಾಟಕ ನವ ನಿರ್ವಾಣ ವೇದಿಕೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಇದ್ದರು.