ಹಿರೇಕೆರೂರಿನಲ್ಲಿ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ನಾಳೆ ಅರ್ಜಿ ಸಲ್ಲಿಕೆ

| Published : Aug 05 2025, 01:30 AM IST

ಹಿರೇಕೆರೂರಿನಲ್ಲಿ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ನಾಳೆ ಅರ್ಜಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆ. 6ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬೆಳೆನಷ್ಟ ಹೊಂದಿದ ರೈತರು ಸಾಮೂಹಿಕವಾಗಿ ಪ್ರತಿಭಟನೆ ಮಾಡಿ, ವೈಯಕ್ತಿಕವಾಗಿ ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಲಾಗುವುದು.

ಹಿರೇಕೆರೂರು: ಬೆಳೆವಿಮೆ ತುಂಬಲು ಪ್ರೋತ್ಸಾಹ ನೀಡಿದ ಅಧಿಕಾರಿಗಳು ಹಾನಿ ಪರಿಶೀಲಿಸಲು ಜಮೀನುಗಳಿಗೆ ವಿಮಾ ಕಂಪನಿಯ ಸಿಬ್ಬಂದಿಯನ್ನು ಕಳುಹಿಸುತ್ತಿಲ್ಲ. ಇದನ್ನು ಖಂಡಿಸಿ ಆ. 6ರಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಜಿಟಿ ಜಿಟಿ ಮಳೆಯಿಂದಾಗಿ ಹಾಳಾದ ಬೆಳೆಗಳ ನಷ್ಟ ಮತ್ತು ಬೆಳೆವಿಮೆಗೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ತಹಸೀಲ್ದಾರ್‌ ಹಾಗೂ ಕೃಷಿ ಉಪನಿರ್ದೇಶಕರು ಜಂಟಿಯಾಗಿ ಬೆಳೆಹಾನಿ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದ್ದರೂ ಯಾವುದೇ ಅಧಿಕಾರಿಗಳು ಜಮೀನುಗಳಿಗೆ ತೆರಳಿ ಬೆಳೆನಷ್ಟದ ಮಾಹಿತಿ ಪಡೆದುಕೊಂಡಿಲ್ಲ ಎಂದು ದೂರಿದರು. ರೈತರು ಈ ಬಾರಿ ಎರಡೆರಡು ಬಾರಿ ಬಿತ್ತನೆ ಮಾಡಿ ಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಹಣ ವ್ಯಯ ಮಾಡಿ ಹಾಕಿದ ಬಂಡವಾಳ ವ್ಯರ್ಥವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಬೆಳೆಹಾನಿ ಸರ್ವೆ ಮಾಡಲು ಸರ್ಕಾರದಿಂದ ಯಾವುದೇ ನಿರ್ದೇಶನವಿಲ್ಲ ಎಂದು ಸಬೂಬು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಬೆಳೆಹಾನಿಯಿಂದಾಗಿ ಕೆಲವು ರೈತರು ಇರುವ ಬೆಳೆನಾಶ ಮಾಡಿ ಬೇರೆ ಬೆಳೆಗಳನ್ನು ಬೆಳೆಯಲು ಭೂಮಿ ಉಳುಮೆ ಮಾಡುತ್ತಿದ್ದಾರೆ. ಇಂತಹ ರೈತರು ಬೆಳೆವಿಮೆಯಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವಿಮೆ ತುಂಬಲು ರೈತರಿಗೆ ಒತ್ತಾಯ ಮಾಡಿ, ಪ್ರೋತ್ಸಾಹ ಮಾಡಿದಂತೆ ಜಮೀನುಗಳಿಗೆ ಹಾನಿ ಪರಿಶೀಲಿಸಲು ವಿಮಾ ಕಂಪನಿ ಸಿಬ್ಬಂದಿಯನ್ನು ಕಳುಹಿಸುತ್ತಿಲ್ಲ. ಆ. 6ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬೆಳೆನಷ್ಟ ಹೊಂದಿದ ರೈತರು ಸಾಮೂಹಿಕವಾಗಿ ಪ್ರತಿಭಟನೆ ಮಾಡಿ, ವೈಯಕ್ತಿಕವಾಗಿ ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಲಾಗುವುದು ಎಂದರು. ರೈತ ಸಂಘದಿಂದ ಬೆಳೆಹಾನಿ ಅರ್ಜಿ ನಮೂನೆಯನ್ನು ಸಿದ್ಧಪಡಿಸಲಾಗಿದ್ದು, ಆ. 6ರಂದು ಬೆಳಗ್ಗೆ ರೈತರು ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಅದರೊಂದಿಗೆ ಆಧಾರ ಕಾರ್ಡ್ ಹಾಗೂ ಬ್ಯಾಂಕ್‌ ಪಾಸ್‌ಬುಕ್ ಝೆರಾಕ್ಸ್‌ನೊಂದಿಗೆ ಅರ್ಜಿ ಸಲ್ಲಿಸಬೇಕು ಎಂದರು.ಆ. 9ರಂದು ಶುಕ್ರವಾರ ಬೆಳೆಹಾನಿ ಮತ್ತು ಮಧ್ಯಂತರ ಬೆಳೆವಿಮೆ ಬಿಡುಗಡೆಗೆ ಆಗ್ರಹಿಸಿ ರಟ್ಟೀಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಶಾಂತನಗೌಡ ಪಾಟೀಲ, ಶಂಕರಗೌಡ ಮಕ್ಕಳ್ಳಿ, ಯಶವಂತ ತಿಮಕಾಪುರ, ನವೀನ್ ಹುಲ್ಲತ್ತಿ ಇದ್ದರು.