ಅರಸೀಕಟ್ಟೆ ಅಮ್ಮ ದೇವಿ ರಥೊತ್ಸವ ಸಂಪನ್ನ

| Published : Jan 18 2025, 12:46 AM IST

ಸಾರಾಂಶ

ಅರಸೀಕಟ್ಟೆ ಅಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಪೂಜಾ ವಿಶೇಷಗಳ ಜೊತೆಗೆ 2 ದಿನಗಳ ಕಾಲ ದೇವಾಲಯ ಸಮಿತಿಯು ಆಯೋಜಿಸಿರುವ ವೈವಿಧ್ಯಮಯ ಚಟುವಟಿಕೆಗಳು ಭಕ್ತರ ಮನ ಗೆಲ್ಲಲಿವೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಅರಸೀಕಟ್ಟೆ ಅಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಪೂಜಾ ವಿಶೇಷಗಳ ಜೊತೆಗೆ 2 ದಿನಗಳ ಕಾಲ ದೇವಾಲಯ ಸಮಿತಿಯು ಆಯೋಜಿಸಿರುವ ವೈವಿಧ್ಯಮಯ ಚಟುವಟಿಕೆಗಳು ಭಕ್ತರ ಮನ ಗೆಲ್ಲಲಿವೆ.

ಮೂರನೇ ವರ್ಷದ ಶ್ರೀ ಅರಸೀಕಟ್ಟೆ ಅಮ್ಮನವರ ಜಾತ್ರಾ ಮಹೋತ್ಸವ ಮತ್ತು ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿಯು ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೂ ಗ್ರಾಮೀಣ ಕ್ರೀಡಾ ಸ್ಫರ್ಧೆಗಳು, ಮ್ಯಾರಥಾನ್ ಓಟ, ಎಚ್.ಪಿ.ಸಿ ಚುಚ್ಚುಮದ್ದು ನೀಡುವುದು ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕ್ರೀಡಾ, ಧಾರ್ಮಿಕ ಸಂಭ್ರಮ ಮನೆಮಾಡಲಾಯಿತು. ಬೆಳಗ್ಗೆ 8 ಗಂಟೆಗೆ ದೇವಾಲಯದ ಆವರಣದಲ್ಲಿ ಗ್ರಾಮೀಣ ಸ್ಪರ್ಧೆಗಳು ಪ್ರಾರಂಭವಾದವು. ಪುರುಷರಿಗಾಗಿ ಗೋಣಿ ಚೀಲದ ಓಟ, ಮೂರುಕಾಲು ಓಟ, ಒಂಟಿಕಾಲು ಓಟ, ಕಾಯಿ ಒಡೆಯುವ ಸ್ಫರ್ಧೆ, ಕೋಲಾಟ ಸ್ಪರ್ಧೆಗಳು, ಮಹಿಳೆಯರಿಗೆ ರಂಗೋಲಿ ಸ್ಫರ್ಧೆ, ನೀರು ತುಂಬಿದ 2 ಬಿಂದಿಗೆಗಳನ್ನು ಹೊತ್ತು ಓಡುವುದು, ಚಮಚದಲ್ಲಿ ನಿಂಬೆಹಣ್ಣಿಟ್ಟುಕೊಂಡು ಓಡುವುದು, ಕೊಂಟೋಪಿಲ್ಲೆ ಮತ್ತು ಪುರುಷರು ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಕಣ್ಣುಕಟ್ಟಿಕೊಂಡು ಮಡಿಕೆ ಓಡೆಯುವುದು, ಹಾಗೂ ೧೬ ವರ್ಷದ ಮಕ್ಕಳಿಗೆ ಸ್ಲೋ ಸೈಕಲ್ ರೇಸ್, ಸಂಗೀತ ಕುಚಿ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.ಏಕವ್ಯಕ್ತಿ ಸ್ಫರ್ಧೆಗಳಿಗೆ ಪ್ರಥಮ ೧ ಸಾವಿರ ರು., ದ್ವಿತೀಯ ೭೫೦ ರು., ತೃತೀಯ ಬಹುಮಾನವಾಗಿ ೫೦೦ ರು. ನಗದನ್ನು ನೀಡಲಾಯಿತು. ಗುಂಪು ಸ್ಫರ್ಧೆಗಳಾದ ಕೋಲಾಟ ಮತ್ತು ಹಗ್ಗಜಗ್ಗಾಟಗಳಿಗೆ ಪ್ರಥಮ ೩ ಸಾವಿರ ರು., ದ್ವಿತೀಯ ೨ ಸಾವಿರ ರು., ಮತ್ತು ತೃತೀಯ ೧ ಸಾವಿರ ರು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.ರಾಮನಾಥಪುರದ ಬಸವೇಶ್ವರ ಸರ್ಕಲ್ ನಿಂದ ಪ್ರಾರಂಭಿಸಿ ಕೊಣನೂರು, ಕೆರೆಕೋಡಿ ಮಾರ್ಗವಾಗಿ ಅರಸೀಕಟ್ಟೆಯವರೆಗೆ ಮ್ಯಾರಥಾನ್ ರನ್ನಿಂಗ್ ರೇಸ್ ನಡೆಯಿತು. ವಿಜೇತರಿಗೆ ಪ್ರಥಮ ₹೫ ಸಾವಿರ, ದ್ವಿತೀಯ ₹೪ ಸಾವಿರ ಮತ್ತು ತೃತೀಯ ₹೩ ಸಾವಿರ ಬಹುಮಾನವಿತ್ತು. ಅರಸೀಕಟ್ಟೆ ಅಮ್ಮ ದೇವಾಲಯದ ಆವರಣದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಕಾರದೊಂದಿಗೆ ಗರ್ಭಕೋಶದ ಕ್ಯಾನ್ಸರ್ ತಡೆಗಂಟ್ಟಲು ೯ ರಿಂದ ೧೪ ವರ್ಷದ ವಯೋಮಿತಿಯ ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಯಿತು. ಇದೆಲ್ಲದರ ನಡುವೆ ಜಾನಪದ ಕಲಾ ಪರಿಷತ್ತಿನ ಸದಸ್ಯ ದೇವಾನಂದ ವರಪ್ರಸಾದ ಮತ್ತು ತಂಡದವರಿಂದ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಅರಸೀಕಟ್ಟೆ ಅಮ್ಮ ದೇವಿಗೆ ರಥೋತ್ಸವ ಮತ್ತು ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯ ಮತ್ತು ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಜ. ೧೬. ೧೭ ಮತ್ತು ೧೮ ರಂದು ಮೂರು ದಿನಗಳ ಕಾಲ ಅರಸೀಕಟ್ಟೆ ಅಮ್ಮ ದೇವಿ ಕ್ಷೇತ್ರದಲ್ಲಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ೧೭ ರ ಶುಕ್ರವಾರ ಮಧ್ಯಾಹ್ನ ೧೨.೩೫ ರಿಂದ ೧.೪೬ ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಅರಸೀಕಟ್ಟೆ ಅಮ್ಮನವರ ರಥೋತ್ಸವ ಜರುಗಿತು.