ಬಹುಸಂಸ್ಕೃತಿ ಅನಾವರಣಗೊಳಿಸಿದ ಸಾಂಸ್ಕೃತಿಕ, ಕ್ರೀಡಾ ಜಾಥಾ!

| Published : Jan 18 2025, 12:46 AM IST

ಸಾರಾಂಶ

ಕರ್ನಾಟಕ ಕ್ರೀಡಾಕೂಟ-2025 ಅಂಗವಾಗಿ ಏರ್ಪಟ್ಟ ಅದ್ದೂರಿಯ ಸಾಂಸ್ಕೃತಿಕ ಮೆರ‍ಣಿಗೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್‌ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಡಳಿತದ ಜೊತೆಗೆ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಹಾಗೂ ಯಕ್ಷಗಾನ ಅಕಾಡೆಮಿಗಳ ಸಂಯೋಜನೆಯ ಬಹುಸಂಸ್ಕೃತಿ ಉತ್ಸವದ ಮೆರವಣಿಗೆಯೂ ರಂಗು ತಂದಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಭಾಗದಲ್ಲಿ ಕನ್ನಡ ರಥ, ಅದರ ಇಕ್ಕೆಲಗಳಲ್ಲಿ ಹಿಂದಿನಿಂದ ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದ ನಾರಿಯರು, ಜೊತೆಯಲ್ಲಿ ಸ್ಯಾಕ್ಸೋಫೋನ್‌, ಕೊಂಬು, ಕಹಳೆಗಳ ಅಬ್ಬರ...

ಇದು ಮಂಗಳೂರಿನ ಪ್ರಮುಖ ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ಕರಾವಳಿ, ಕನ್ನಡನಾಡಿನ ಸಾಂಸ್ಕೃತಿಕ ವೈಭವದ ಝಲಕ್‌.

ಕರ್ನಾಟಕ ಕ್ರೀಡಾಕೂಟ-2025 ಅಂಗವಾಗಿ ಏರ್ಪಟ್ಟ ಅದ್ದೂರಿಯ ಸಾಂಸ್ಕೃತಿಕ ಮೆರ‍ಣಿಗೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್‌ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಡಳಿತದ ಜೊತೆಗೆ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಹಾಗೂ ಯಕ್ಷಗಾನ ಅಕಾಡೆಮಿಗಳ ಸಂಯೋಜನೆಯ ಬಹುಸಂಸ್ಕೃತಿ ಉತ್ಸವದ ಮೆರವಣಿಗೆಯೂ ರಂಗು ತಂದಿತು.

ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣ ಬಳಿಯಿಂದ ಸಂಜೆ 4 ಗಂಟೆಗೆ ಹೊರಟ ಮೆರ‍ಣಿಗೆ 5.15ರ ಸುಮಾರಿಗೆ ಮಂಗಳಾ ಕ್ರೀಡಾಂಗಣ ತಲುಪಿತು. ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮೆರವಣಿಗೆ ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ತೆರೆದಿಟ್ಟಿತು.

ಮೆರ‍ಣಿಗೆಯಲ್ಲಿ ಘಟೋತ್ಕಜ, ಕೊರಗರ ಗಜಮೇಳ, ಸಾಂಪ್ರದಾಯಿಕ ಚೆಂಡೆ ವಾದನ, ಲಂಬಾಣಿ ನೃತ್ಯ, ಕಂಸಾಳೆ, ಗೋರ್ಕಾನ ನೃತ್ಯ, ಕಿಂಗ್ ಕಾಂಗ್‌, ಹುಲಿ ಕುಣಿತ, ಉರ್ತಿಕೋರ್ತ ತೋರ, ಉಮ್ಮತಾಟ್‌, ದುಡಿ ಕುಣಿತ, ಯಕ್ಷಗಾನ ಗೊಂಬೆ, ದಫ್‌, ಕೋಲಾಟ, ಕೋಲ್ಕಲಿ, ಕುಡುಬಿ ನೃತ್ಯ, ಸಿದ್ಧಿ ಕುಣಿತ, ತಮಟೆ, ನಗಾರಿ, ಕಲ್ಲಡ್ಕ ಗೊಂಬೆ, ಬ್ರಾಸ್‌ ಬ್ಯಾಂಡ್‌, ಆಳ್ವಾಸ್‌ ಡೊಳ್ಳು ಕುಣಿತ, ಮರಗಾಲು, ಆಳ್ವಾಸ್‌ ಶೃಂಗಾರಿ ಮೇಳ, ಬೇಡರ ಕುಣಿತ, ಕಂಗೀಲು, ಪೂಜಾ ಕುಣಿತ, ನಾಸಿಕ್‌ ಬ್ಯಾಂಡ್‌, ಕರಾಟೆ ತಂಡ, ಸ್ಕೇಟಿಂಗ್‌, ಸ್ಕೌಟ್ಸ್‌, ಗೈಡ್ಸ್‌, ರೋವರ್ಸ್‌, ರೇಂಜರ್ಸ್‌, ಎನ್‌ಎಸ್‌ಎಸ್‌ ಘಟಕಗಳು, ಸೈಕ್ಲಿಂಗ್‌ ತಂಡ ನೌಕಾಯಾನ ತಂಡ, ವಿವಿಧ ಶಾಲಾ ಕಾಲೇಜುಗಳ ತಂಡಗಳು ಮೆರವಣಿಗೆ ವಿಶೇಷ ಮೆರುಗು ನೀಡಿತು.

ಗಮನ ಸೆಳೆದ ಶಕ್ತಿ ಯೋಜನೆಯ ಬಸ್‌!

ಮೆರ‍ಣಿಗೆಯಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಮಹತ್ವ ಸಾರುವ ಕೆಎಸ್‌ಆರ್‌ಟಿಸಿಯ ಟ್ಯಾಬ್ಲೋ ಗಮನ ಸೆಳೆಯಿತು. ಇಡೀ ಬಸ್‌ನ್ನು ರಥದ ಮಾದರಿಯಲ್ಲಿ ಅಲಂಕರಿಸಿ ಸುತ್ತಲೂ ಚಿತ್ರ ಸಹಿತ ಸರ್ಕಾರದ ಶಕ್ತಿ ಯೋಜನೆಯ ವಿವರ ಪ್ರದರ್ಶಿಸಲಾಗಿತ್ತು. ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು, ಬಸ್‌ನ ಒಳಗೆ ಕನ್ನಡದ ಬಾವುಟ, ಬಣ್ಣಗಳ ಕಮಾನುಗಳಿಂದ ಶೃಂಗರಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಇದನ್ನು ಸಂಘಟಿಸಿತ್ತು.

ಸುಮಾರು 68 ತಂಡಗಳು ಮೆರ‍ಣಿಗೆಯಲ್ಲಿ ಭಾಗವಹಿಸಿದ್ದವು.