ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಗೋಸಾವಿ ಸಮಾಜದವರ ಮೇಲೆ ಲಾಠಿ ಬೀಸಿದ್ದನ್ನು ಖಂಡಿಸಿ ಶ್ರೀರಾಮ ಸೇನೆ ಹಾಗೂ ಹಿಂದೂಪರ ಸಂಘಟನೆಗಳು ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ, ಹಿಂದೂಪರ ಸಂಘಟನೆಯ ಸದಸ್ಯರು ಹಾಗೂ ಗೋಸಾವಿ ಸಮಾಜದ ಇತರರು ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಪ್ರತಿಭಟನೆಗೆ ಆಗಮಿಸುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದು ಬಸ್ಸಿನಲ್ಲಿ ಹತ್ತಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಘಟನೆ ಶನಿವಾರ ಮದ್ಯಾಹ್ನ ನಡೆಯಿತು. ಪಟ್ಟಣದ ಗೋಸಾವಿ ಸಮಾಜ ಬಾಂಧವರು ದಸರಾ ಹಬ್ಬದ ಹಿನ್ನೆಲೆಯಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಅನ್ಯ ಕೋಮಿನ ವ್ಯಕ್ತಿಯೊಂದಿಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ್ದ ಗೋಸಾವಿ ಸಮಾಜದವರ ಮೇಲೆ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಅ. 19ರಂದು ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದರು.
ಕಳೆದ ಒಂದು ವಾರದಿಂದ ಶ್ರೀರಾಮ ಸೇನೆಯ ಪರ ಹಾಗೂ ಪಿಎಸ್‌ಐ ಈರಪ್ಪ ರಿತ್ತಿ ಪರ ಸಂಘಟನೆಯ ಸದಸ್ಯರ ನಡುವೆ ಮಾತಿನ ಯುದ್ಧ ನಡೆದು ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪನವರ ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದನ್ನು ಖಂಡಿಸಿ ಕೆಲ ಸಂಘಟನೆಗಳು ಬಂದ್ ವಾಪಸ್ ಪಡೆಯುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಎನ್‌ಎಸ್‌ಎಸ್ ಕಾಯ್ದೆ ಅನ್ವಯ 163 ಕಲಂ ಜಾರಿಗೊಳಿಸಿ ತಹಸೀಲ್ದಾರ ಆದೇಶ ಹೊರಡಿಸಿದ್ದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನೀರ್ಮಾಣವಾಗಿದ್ದು ಕಂಡು ಬಂದಿತು.ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿದ್ದಾಗ ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪನವರ ಲಕ್ಷ್ಮೇಶ್ವರ ಪಟ್ಟಣಕ್ಕೆ ಬರದಂತೆ ತಡೆಯುವ ಎಲ್ಲ ಪ್ರಯತ್ನ ನಡೆದ್ದಿದ್ದವು. ಇದರ ಸುಳಿವು ಅರಿತ ರಾಜು ಖಾನಪ್ಪನವರ ಶುಕ್ರವಾರ ಸಂಜೆಯೇ ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಶನಿವಾರ ಮದ್ಯಾಹ್ನ ರಾಜು ಖಾನಪ್ಪನವರ ಹಾಗೂ ಗೋಸಾವಿ ಸಮಾಜದ ಹಲವರು ದಿಢೀರ್ ಪ್ರತ್ಯಕ್ಷರಾಗಿ ಪಿಎಸ್‌ಐ ಈರಪ್ಪ ರಿತ್ತಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿದ ಪೊಲೀಸರು ಗಲಿಬಿಲಿಗೊಂಡ ಘಟನೆ ನಡೆಯಿತು. ಕೆಲ ಹೊತ್ತು ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಸುತ್ತಮುತ್ತ ಬೀಗುವಿನ ವಾತಾವರಣ ನಿರ್ಮಾಣವಾಗಿದ್ದು ಕಂಡು ಬಂದಿತು.
ಈ ವೇಳೆ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ 33 ಜನರನ್ನು ವಶಕ್ಕೆ ಪಡೆದುಕೊಂಡು ಅಜ್ಞಾತ ಸ್ಥಳಕ್ಕೆ ಬಸ್ಸಿನಲ್ಲಿ ಕರೆದುಕೊಂಡು ಹೋದ ಘಟನೆ ನಡೆಯಿತು. ಘಟನೆಯಲ್ಲಿ 27 ಪುರುಷರು ಹಾಗೂ 6 ಜನ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಬಿ.ಎಸ್. ನೇಮಗೌಡ ತಿಳಿಸಿದರು.