ಸಾರಾಂಶ
ಹುಬ್ಬಳ್ಳಿ:
ವೃತ್ತಿಪರ ನೇಕಾರರಿಗೆ ಕಾರ್ಮಿಕ ಇಲಾಖೆಯ ಸೌಲಭ್ಯ ನೀಡುವುದು ಹಾಗೂ ಎಲ್ಲ ನೇಕಾರರಿಗೂ ಕಾರ್ಮಿಕ ಕಾರ್ಡ್ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.ಕಳೆದ ಅ. 13ರಿಂದ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಿಂದ ಆರಂಭವಾಗಿದ್ದ ಪಾದಯಾತ್ರೆಯು ಬೆಳಗಾವಿ, ಧಾರವಾಡ ಮಾರ್ಗವಾಗಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು.ಸರ್ಕಾರಗಳು ನೇಕಾರ ಸಮುದಾಯದ ಹಿತ ಕಾಪಾಡುತ್ತಿಲ್ಲ. ನೇಕಾರ ಸಮಾಜವು ನೇಕಾರಿಕೆಯಿಂದ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೇಕಾರರ ಹಿತಾಭಿವೃದ್ಧಿಗೆ ಇರುವ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಅನೇಕ ಜಿಲ್ಲೆಗಳಲ್ಲಿ ನೇಕಾರರ ಹೆಸರಿನಲ್ಲಿ ಇಲಾಖೆ ಮತ್ತು ಸಹಕಾರಿ ಸಂಘಗಳ ಮೂಲಕ ಅನುದಾನದ ದುರ್ಬಳಕೆಯಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.ಕೆಎಚ್‌ಡಿಸಿಯಲ್ಲಿ 37 ವರ್ಷಗಳಿಂದ ವಾಸಿಸುತ್ತಿರುವ 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಿಟಿಎಸ್ ಉತಾರ ವಿತರಿಸಬೇಕು. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮೂರು ವರ್ಷಗಳಿಂದ 52 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ನೇಕಾರರು ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ರೈತ ಸಮ್ಮಾನ್ ಯೋಜನೆಯಂತೆ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದು ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡಿನಲ್ಲಿ ನೇಕಾರರನ್ನು ಪ್ರೋತ್ಸಾಹಿಸಿದಂತೆ ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸರ್ಕಾರದಿಂದ ₹1500 ಕೋಟಿ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು. ಆನಂತರ ಕೆಎಚ್‌ಡಿಸಿ ಕೇಂದ್ರಕ್ಕೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರಕಿ, ಪದಾಧಿಕಾರಿಗಳಾದ ಜಗದೀಶ ಗುಳ್ಳ, ರಾಜೇಂದ್ರ ಮಿರ್ಜಿ, ರಾಜು ದಡಿ, ಕಾಶಿನಾಥ ತಿಗಡಿ, ಬಸವರಾಜ ಚೌಕಾಶಿ, ನಾರಾಯಣ ಹವಳಕರ, ರುದ್ರಪ್ಪ ಕಾಮಕರ, ಮಾಧುಸಾ ಮೆಹರವಾಡೆ ಹಾಗೂ ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ನೇಕಾರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))