ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿದ ಕಿಡಿಗೇಡಿಗಳನ್ನು ಬಂಧಿಸಿ: ಮಾಜಿ ಸಂಸದ ಮುನಿಸ್ವಾಮಿ

| Published : Sep 09 2025, 01:00 AM IST

ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿದ ಕಿಡಿಗೇಡಿಗಳನ್ನು ಬಂಧಿಸಿ: ಮಾಜಿ ಸಂಸದ ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಪಟ್ಟಣದಲ್ಲಿ ಮುಸ್ಲಿಮರು ಎಲ್ಲಾ ಹಬ್ಬಗಳಲ್ಲಿ ಯಾವುದೇ ಬ್ಯಾನರ್ ಇಲ್ಲದೆ ಪ್ರಾರ್ಥನೆಯಲ್ಲಿ ತೊಡಗಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದರು, ಆದರೆ ಈಗ ಮೀಸೆ ಬಾರದವರೂ ಕೂಡ ಅನ್ಯ ದೇಶದ ಬಾವುಟ ಹಾರಿಸಿ ಎರಡೂ ಕೋಮಿನ ಜನರ ನಡುವೆ ದ್ವೇಷ ಭಾವನೆ ಮೂಡುವಂತೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಳೆದ ಶುಕ್ರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ವೇಳೆ ನಡೆದ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿಗಳು ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಮಾಡುವ ಮೂಲಕ ಉದ್ಧಟತನ ತೋರಿರುವುದನ್ನು ನೋಡಿದರೆ ಇಂತಹ ಕೃತ್ಯಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ ಎಂಬ ಅನುಮಾನ ಮೂಡುತ್ತದೆ, ಆದ್ದರಿಂದ ಕೂಡಲೇ ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಬಂಧಿಸಬೇಕೆಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.

ಪಟ್ಟಣದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಈ ಹಿಂದೆ ಪಟ್ಟಣದಲ್ಲಿ ಮುಸ್ಲಿಮರು ಎಲ್ಲಾ ಹಬ್ಬಗಳಲ್ಲಿ ಯಾವುದೇ ಬ್ಯಾನರ್ ಇಲ್ಲದೆ ಪ್ರಾರ್ಥನೆಯಲ್ಲಿ ತೊಡಗಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದರು, ಆದರೆ ಈಗ ಮೀಸೆ ಬಾರದವರೂ ಕೂಡ ಅನ್ಯ ದೇಶದ ಬಾವುಟ ಹಾರಿಸಿ ಎರಡೂ ಕೋಮಿನ ಜನರ ನಡುವೆ ದ್ವೇಷ ಭಾವನೆ ಮೂಡುವಂತೆ ಮಾಡಿದ್ದಾರೆ, ಪೊಲೀಸರ ಮೇಲೆ ಹಲ್ಲೆ ಮಾಡಿದರೂ, ಠಾಣೆಗೆ ಬೆಂಕಿ ಹಚ್ಚಿದರೂ ಖುಲಾಸೆ ಮಾಡುವರೆಂಬ ಧೈರ್ಯದಿಂದ ಉದ್ಧಟತನದಲ್ಲಿ ತೊಡಗಿದ್ದಾರೆ, ಕಾಂಗ್ರೆಸ್ ಸರ್ಕಾರ ನಮ್ಮ ಹಿಂದೆ ಇದೆ ಎಂದು ಈ ಕೃತ್ಯಕ್ಕೆ ಇಳಿದಿದ್ದಾರೆ, ದೇಶದ ಬಾವುಟ ಪ್ರದರ್ಶನ ಮಾಡದೆ ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿರುವ ಕಿಡಿಗೇಡಿಗಳನ್ನು ಬಂಧಿಸಿ, ಅವರ ಹಿಂದೆ ಯಾವ ಸಂಘಟನೆ ಬೆಂಬಲವಾಗಿದೆ ಎಂಬುದನ್ನು ಬಯಲಿಗೆ ತರಬೇಕೆಂದು ಒತ್ತಾಯಿಸಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಬೆಳೆಸಿದ್ದ ಮರ, ಗಿಡಗಳನ್ನು ತಹಸೀಲ್ದಾರ್ ಸುಜಾತರವರು ತೆರವುಗೊಳಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ, ಇವರ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದರು. ಒಂದು ಕಡೆ ಜಿಲ್ಲಾಧಿಕಾರಿಗಳು ಪರಿಸರ ರಕ್ಷಣೆಗೆ ಗಿಡಗಳನ್ನು ಪೋಷಿಸಲು ಸೂಚನೆ ನೀಡಿದ್ದರೆ ಮತ್ತೊಂದು ಕಡೆ ತಹಸೀಲ್ದಾರ್ ಸುಜಾತ ತಮ್ಮ ಕಚೇರಿ ಆವರಣದಲ್ಲಿ ಬೆಳೆಸಿದ್ದ ಮರ ಗಿಡಗಳನ್ನು ತೆರವುಗೊಳಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆಗೆ ವಿರುದ್ಧ ನಡೆದುಕೊಂಡಿದ್ದಾರೆ. ಎಷ್ಟು ಮರ ಗಿಡಗಳನ್ನು ತೆರವುಗೊಳಿಸಲಾಗಿದೆಯೋ ಅದರ ಎರಡರಷ್ಟು ಮರಗಳನ್ನು ತಹಸೀಲ್ದಾರ್ ರಿಂದಲೇ ಬೆಳೆಸಲು ಡೀಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

೨೦೧೩ರಲ್ಲೇ ಪಟ್ಟಣದ ರಹಿಮುನ್ನಿಸ್ ಬಡಾವಣೆಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಜಾಗ ನಿಗಡಿಪಡಿಸಲಾಗಿತ್ತು, ಆದರೆ ಇದುವರೆಗೂ ಕಟ್ಟಡ ನಿರ್ಮಾಣ ಮಾಡದೆ ಕಡೆಗಣಿಸಿರುವುದರಿಂದ ಕೊಟ್ಟಿರುವ ಜಾಗ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ, ಮಳೆ ಬಂದರೆ ಉಪ ನೋಂದಣಾಧಿಕಾರಿ ಕಚೇರಿ ಸೋರುತ್ತದೆ, ಮಳೆಗಾಲದಲ್ಲಿ ಕೆಲಸ ಮಾಡಲು ಅಡ್ಡಿಯಾಗಿದೆ, ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಕಪಾಲಿ ಶಂಕರ್, ಹೊಸರಾಯಪ್ಪ, ಮುನಿಯಪ್ಪ, ನಾರಾಯಣಸ್ವಾಮಿ ಇದ್ದರು.