ಕೃತಕ ಬುದ್ಧಿಮತ್ತೆಯಿಂದ ಸುದ್ದಿ ಮನೆ ಉದ್ಯೋಗಿಗಳಿಗೆ ಆತಂಕ: ರಾಜಾರಾಮ್‌ ತಲ್ಲೂರು

| Published : Jul 02 2025, 11:52 PM IST

ಕೃತಕ ಬುದ್ಧಿಮತ್ತೆಯಿಂದ ಸುದ್ದಿ ಮನೆ ಉದ್ಯೋಗಿಗಳಿಗೆ ಆತಂಕ: ರಾಜಾರಾಮ್‌ ತಲ್ಲೂರು
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯಲ್ಲಿ ಅಂಕಣಕಾರ ರಾಜಾರಾಂ ತಲ್ಲೂರು ‘ಮಾಧ್ಯಮ: ಮುಂದಿನ 10ವರ್ಷಗಳ- ಮಿಡಿಯಾ ಕನ್ವರ್ಜೆನ್ಸ್, ಎಲ್ಎಲ್ಎಂ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೃತಕ ಬುದ್ದಿಮತ್ತೆ ಸುದ್ದಿಮನೆ ಪ್ರವೇಶಿಸಿದರೆ, ಕೆಲವೇ ವರ್ಷಗಳಲ್ಲಿ ಪತ್ರಿಕೋದ್ಯಮದಲ್ಲಿರುವ ಅರ್ಧದಷ್ಟು ಪತ್ರಕರ್ತರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಎಂದು ಅಂಕಣಕಾರ ರಾಜಾರಾಂ ತಲ್ಲೂರು ಆತಂಕ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯಲ್ಲಿ ಅವರು ‘ಮಾಧ್ಯಮ: ಮುಂದಿನ 10ವರ್ಷಗಳ- ಮಿಡಿಯಾ ಕನ್ವರ್ಜೆನ್ಸ್, ಎಲ್ಎಲ್ಎಂ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ನಮ್ಮಲ್ಲಿ ಈವರೆಗೆ ಖಾಸಗಿತನ, ಬೌದ್ಧಿಕ ಹಕ್ಕು, ಕಾಪಿರೈಟ್ ಇತ್ಯಾದಿಗಳ ಕಾನೂನುಗಳೆಲ್ಲ ತೀರಾ ಸಡಿಲ ಆಗಿವೆ. ಆದರೆ ಈಗ ಕೃತಕ ಬುದ್ದಿಮತ್ತೆ ಕಂಪ್ಯೂಟರ್‌ಗಳು ಎಲ್ಎಲ್ಎಂ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಬಳಸಿ ಕೌಶಲಗಳನ್ನು ಕಲಿಯುತ್ತಿವೆ. ಹೀಗೆ ಮುಂದುವರಿದು ನಮ್ಮ ಕೌಶಲವನ್ನು ಅವು ಬಳಸಿಕೊಂಡು, ತಾವು ಕಲಿತು ನಮ್ಮ ಉದ್ಯೋಗವನ್ನು ಕಿತ್ತುಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಅವರು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್, ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಮೂರು ಅಂಗಗಳು ಸರಿಯಾಗಿ ಕೆಲಸ ಮಾಡದೇ ಇದ್ದಾಗ ವಿಮರ್ಶೆ ಮಾಡುವ ಅಧಿಕಾರ ಇರುವುದು ಪತ್ರಿಕಾ ಮಾಧ್ಯಮಕ್ಕೆ. ಪತ್ರಿಕಾ ಸ್ವಾತಂತ್ರ ಬಲಿಷ್ಠವಾಗಿರುವಷ್ಟು ಪ್ರಜಾಪ್ರಭುತ್ವ ಬಲಿಷ್ಠ ಆಗಿರುತ್ತದೆ ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಚ್‌ಪಿಆರ್ ಸಂಸ್ಥೆಗಳ ಮುಖ್ಯಸ್ಥ ಹರಿಪ್ರಸಾದ್ ರೈ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು. ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು. ಹಿರಿಯ ಪತ್ರಕರ್ತ ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯ ಅವರಿಗೆ ಪ್ರತಿಕಾ ದಿನದ ಗೌರವವನ್ನು ಸಲ್ಲಿಸಲಾಯಿತು.

ವಾರ್ತಾಧಿಕಾರಿ ಮಂಜುನಾಥ್, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಇದ್ದರು. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳ ಪಟ್ಟಿಯನ್ನು ಸಮಿತಿ ಸದಸ್ಯ ಮೈಕಲ್ ರೋಡ್ರಿಗಸ್ ವಾಚಿಸಿದರು. ಕಾರ್ಯದರ್ಶಿ ರಹೀಂ ಉಜಿರೆ ಉಪನ್ಯಾಸಕರ ಪರಿಚಯ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತೆ ರಾಧಿಕಾ ನಿರೂಪಿಸಿದರು.