ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು: ಆಶಾ ಕಾರ್ಯಕರ್ತೆಯರು

| Published : Aug 01 2024, 12:18 AM IST

ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು: ಆಶಾ ಕಾರ್ಯಕರ್ತೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಗೊತ್ತುವಳಿಯನ್ನು ಚಾಮರಾಜನಗರದ ವಾಲ್ಮೀಕಿ ಭವನದದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಈ ಗೊತ್ತುವಳಿಯನ್ನು ಮಂಡಿಸಲಾಯಿತು.

ಗೊತ್ತುವಳಿ ಮಂಡನೆ । ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನ ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಗೊತ್ತುವಳಿಯನ್ನು ಮಂಡಿಸಲಾಯಿತು.ನಗರದ ವಾಲ್ಮೀಕಿ ಭವನದದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಈ ಗೊತ್ತುವಳಿಯನ್ನು ಮಂಡಿಸಿ ಹಲವಾರು ಹಕ್ಕೊತ್ತಾಯಗಳಿಗೆ ಆಗ್ರಹಿಸಲಾಯಿತು. ಈ ಸಮ್ಮೇಳನದ ಮೂಲಕ ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್‌ನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಬಲಿಷ್ಠ ಹೋರಾಟಕ್ಕೆ ಸಜ್ಜಾಗಬೇಕೆಂದು ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಲಾಯಿತು.

ತಾಯಿ ಮಕ್ಕಳ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು. ಆಶಾಗಳಿಂದಲೇ ಕೋವಿಡ್ ಸಂದರ್ಭದಲ್ಲಿ ಆಶಾಗಳು ತಮ್ಮ ಜವಾಬ್ದಾರಿ ನಿಭಾಯಿಸಿದ ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಜಾಗತಿಕ ಆರೋಗ್ಯ ನಾಯಕರು ಎಂಬ ಬಿರುದು ಕೂಡ ಲಭಿಸಿದೆ. ಆದರೂ ಅವರ ಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಅತ್ಯಂತ ಕನಿಷ್ಠ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಪ್ರೋತ್ಸಾಹ ಧನದ ಹೆಸರಲ್ಲಿ ಅವರ ಶೋಷಣೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. 10-15 ವರ್ಷಗಳಿಂದ ದುಡಿಯುತ್ತಿದ್ದರೂ, ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ. ಕನಿಷ್ಠ ಪಕ್ಷ ಕಾರ್ಮಿಕರೆಂದೂ ಪರಿಗಣಿಸಲು ಸಹ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖಂಡರು ಆರೋಪಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ದೇಶವನ್ನಾಳಿದ ಎಲ್ಲಾ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿ ಕೊಟ್ಟು ದೊಡ್ಡ ದೊಡ್ಡ ಉದ್ಯಮ ಪತಿಗಳ ಸೇವೆ ಮಾಡುತ್ತಾ ಬಂದಿವೆ ಎಂದರು.

1991ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯನ್ನು ಕಾನೂನಾತ್ಮಕಗೊಳಿಸಿತು. ಇದೇ ನೀತಿಗಳನ್ನು ಬಿಜೆಪಿ ಸರ್ಕಾರ ಮುಂದುವರೆಸಿ, ಮತ್ತಷ್ಟು ವೇಗವಾಗಿ ಜಾರಿಗೆ ತರುತ್ತಿದೆ. ಕಾರ್ಯಕರ್ತೆಯರು ಎಂದು ನಾಮಕರಣ ಮಾಡಿ ಎಲ್ಲಾ ಸರ್ಕಾರಗಳು ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರನ್ನು ನ್ಯಾಯಬದ್ಧ ಕಾರ್ಮಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿವೆ ಎಂದರು.ಇಂತಹ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಇಡೀ ಕಾರ್ಮಿಕ ವರ್ಗ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ, ಬಂಡವಾಳಶಾಹಿ ಪರವಾದ ನೀತಿಗಳ ವಿರುದ್ಧವೂ ಧ್ವನಿಯೆತ್ತಬೇಕಾಗಿದೆ ಎಂದರು.ಜಿಲ್ಲಾಧ್ಯಕ್ಷೆ ಕವಿತಾ, ಜಯಲಕ್ಷ್ಮಿ, ಉಮಾದೇವಿ, ಮಂಜುಳ, ಚೆನ್ನಾಜಮ್ಮ, ಸುಜಾತ, ರಾಣಿ, ಶಶಿಕಲಾ, ಸುಲೋಚನಾ ಸೇರಿದಂತೆ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮ್ಮೇಳನಕ್ಕೂ ಮುನ್ನಾ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ವಾಲ್ಮೀಕಿ ಭವನದ ವರೆಗೆ ಜಾಥಾ ನಡೆಯಿತು.