ಪತ್ರಿಕಾರಂಗದಿಂದ ಸಾಮಾಜಿಕ ನ್ಯಾಯ

| Published : Aug 01 2024, 12:18 AM IST

ಸಾರಾಂಶ

ಸಮಾಜಕ್ಕೆ ಬಹು ವರ್ಷಗಳಿಂದ ಎಚ್ಚರಿಕೆಯ ಗಂಟೆಯಾಗಿರುವುದು ಪತ್ರಿಕೆಗಳು ಮಾತ್ರ. ಈ ಹಿಂದೆ ರಾಜ್ಯಕ್ಕೆ,ಜಿಲ್ಲೆಗೆ, ತಾಲೂಕಿಗೆ, ಪ್ರದೇಶಕ್ಕೆ ಮಾನ್ಯತೆ ತಂದು ಕೊಡುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ

ಮುಂಡರಗಿ: ಸರ್ಕಾರ ದಾರಿ ತಪ್ಪಿದಾಗ ಎಚ್ಚರಿಸುವ, ವ್ಯವಸ್ಥೆಯಲ್ಲಿ ಏನಾದರೂ ಗದ್ದಲ ಏಳುತ್ತಿದ್ದರೆ ಅದನ್ನು ಸಮಾಧಾನ ಸ್ಥಿತಿಗೆ, ಸರಿಸ್ಥಿತಿಗೆ ತರುವ ದೊಡ್ಡ ಅಸ್ತ್ರವೆಂದರೆ ಅದು ಪತ್ರಿಕೆ. ಪತ್ರಿಕಾ ಸ್ವಾತಂತ್ರ್ಯ ಸರ್ಕಾರದ ನಾಲ್ಕನೇ ಅಂಗ. ಪತ್ರಿಕಾರಂಗದಿಂದ ಮಾತ್ರ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಸಾಹಿತಿ, ಕತೆಗಾರ ಸಂಗಮನಾಥ ಲೋಕಾಪೂರ ಹೇಳಿದರು. ಅವರು ಸೋಮವಾರ ಪಟ್ಟಣದ ಜ. ತೋಂಟದಾರ್ಯ ಮಠದಲ್ಲಿ ಜರಗುತ್ತಿರುವ ಅನುಭಾವ ದರ್ಶನ ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಚನ ಸಾಹಿತ್ಯದಲ್ಲಿ ಮಾಧ್ಯಮ ಕುರಿತು ಮಾತನಾಡಿದರು.

ಸಮಾಜಕ್ಕೆ ಬಹು ವರ್ಷಗಳಿಂದ ಎಚ್ಚರಿಕೆಯ ಗಂಟೆಯಾಗಿರುವುದು ಪತ್ರಿಕೆಗಳು ಮಾತ್ರ. ಈ ಹಿಂದೆ ರಾಜ್ಯಕ್ಕೆ,ಜಿಲ್ಲೆಗೆ, ತಾಲೂಕಿಗೆ, ಪ್ರದೇಶಕ್ಕೆ ಮಾನ್ಯತೆ ತಂದು ಕೊಡುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. 12ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರು ಅಂದು ಸಾಮಾಜಿಕ ನ್ಯಾಯ ಜಾತೀಯತೆ ಪಿಡುಗು, ಸ್ತ್ರೀ ಶೋಷಣೆ ಕುರಿತು ತಮ್ಮ ವಚನಗಳಿಂದಲೇ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಅನುಭವ ಮಂಟಪದ ಮೂಲಕ ವಚನ ಚಳವಳಿ ಬಾಯಿಂದ ಬಾಯಿಗೆ ರಾಜ್ಯ, ಹೊರ ರಾಜ್ಯಗಳ ಶರಣರಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ವಚನಗಳು ಮಾಧ್ಯಮದ ರೂಪದಲ್ಲಿ ಕೆಲಸ ಮಾಡಿದವು. ಜಾಗತಿಕ ಮಟ್ಟದಲ್ಲಿ ತಮ್ಮ ಬಸವತತ್ವ ಪ್ರಚಾರ ಕೈಗೊಂಡಿರುವ ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಗಳ ಕಾರ್ಯ 12ನೇ ಶತಮಾನದಲ್ಲಿ ಕೈಗೊಂಡ ಶರಣರ ನಡೆಯಂತಿದೆ. ಹೀಗಾಗಿ ಶ್ರೀಗಳನ್ನು ಸ್ವಾಮೀಜಿ ಎನ್ನದೆ ಶರಣರು ಎನ್ನುವಂತಾಗಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸಿ.ಎಸ್. ಅರಸನಾಳ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಪತ್ರಿಕೆಗಳು,ಪತ್ರಕರ್ತರು ಬದಲಾಗಿದ್ದಾರೆ. ಪತ್ರಿಕೆ ಪತ್ರಿಕೋದ್ಯಮಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಓದುಗ ಒಳ್ಳೆಯ ಸುದ್ದಿಗಿಂತ ಕ್ರೈಂ ವರದಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಓದುಗರಿಗೆ ತಕ್ಕಂತೆ ಪತ್ರಕರ್ತ, ಪತ್ರಿಕೆಗಳು ಬದಲಾಗಿವೆ ಎಂದರು.

ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಗಮನಾಥ ಲೋಕಾಪುರ, ಪತ್ರಕರ್ತರಾದ ಸಿ.ಎಸ್. ಅರಸನಾಳ, ಸಿ.ಕೆ. ಗಣಪ್ಪನವರ , ಶರಣು ಸೊಲಗಿ, ಕಾಶೀನಾಥ ಬಿಳಿಮಗ್ಗದ, ಸಂತೋಷ ಮುರುಡಿ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಕೊಪ್ಪಳ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಅಡಿವೆಪ್ಪ ಚಲವಾದಿ, ಅಶೋಕ ಹುಬ್ಬಳ್ಳಿ, ಪವನ ಚೋಪ್ರಾ, ಸದಾಶಿವಯ್ಯ ಕಬ್ಬೂರಮಠ, ಕೊಟ್ರೇಶ ಅಂಗಡಿ, ಎಚ್.ವಿರುಪಾಕ್ಷಗೌಡ್ರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿದ್ದಲಿಂಗೇಶ ಕಬ್ಬೂರಮಠ ನಿರೂಪಿಸಿ, ವಂದಿಸಿದರು.