ಸಾರಾಂಶ
ಗೋಕರ್ಣ: ಜ್ಯೋತಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಜೀವನದ ಎಲ್ಲ ಹಂತಗಳೂ ನಮಗೆ ಇದು ಪ್ರಯೋಜನಕ್ಕೆ ಬರುತ್ತದೆ. ಆದ್ದರಿಂದ ಒಳ್ಳೆಯ ಜೀವನ ಸಾಗಿಸಬೇಕಾದರೆ ಜ್ಯೋತಿಷ್ಯದ ಮೂಲತತ್ವಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 45ನೇ ದಿನವಾದ ಮಂಗಳವಾರ ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ನಮ್ಮ ಪೂರ್ವಜರಲ್ಲಿ ಗ್ರಹಗತಿಗಳ ಪ್ರಜ್ಞೆ ಸದಾ ಇತ್ತು. ಈ ಪ್ರಜ್ಞೆ ಇದ್ದರೆ, ಪ್ರತಿ ಹಂತದಲ್ಲಿ ಅದು ನಮ್ಮ ನೆರವಿಗೆ ಬರುತ್ತದೆ. ಇಂಥ ಅಪೂರ್ವ ಶಾಸ್ತ್ರದ ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು ಮತ್ತು ತಲಸ್ಪರ್ಶಿಯಾಗಿ ಅಗತ್ಯಕ್ಕೆ ತಕ್ಕಂತೆ ಬಳಸುವ ಜ್ಞಾನ ನಮಗೆ ಬೇಕು ಎಂದರು.ಹುಟ್ಟುವಾಗ ಯಾವ ರಾಶಿ ಪೂರ್ವದಲ್ಲಿ ಉದಯವಾಗುತ್ತಿತ್ತೋ ಅದು ಆ ವ್ಯಕ್ತಿಯ ಜಾತಕದ ಲಗ್ನ ಎನ್ನುತ್ತೇವೆ. ಆದರೆ ಪ್ರಶ್ನಚಿಂತನೆಯಲ್ಲಿ ಹಲವು ಬಗೆಯಲ್ಲಿ ಲಗ್ನವನ್ನು ನಿರ್ಧರಿಸಬಹುದು. ಉದಾಹರಣೆಗೆ ತತ್ಕಾಲ ಲಗ್ನ, ಲಗ್ನಾಂಶ, ಚಂದ್ರನಿರುವ ರಾಶಿ, ಪ್ರಶ್ನೆ ಬಂದ ವ್ಯಕ್ತಿಯ ನಿಲುವಿನಿಂದ, ಸೃಷ್ಟಾಂಗ, ಅಕ್ಷರದಿಂದಲೂ ಲಗ್ನವನ್ನು ಕಂಡುಹಿಡಿಯಬಹುದು. ತಾಂಬೂಲ, ಕವಡೆ, ಶಿಶುಹಸ್ತ ವಿಧಾನದಿಂದಲೂ ಲಗ್ನ ತಿಳಿಯಬಹುದು. ಮೈಯೆಲ್ಲಾ ಕಣ್ಣಾಗಿದ್ದು, ಕಿವಿಯಾಗಿದ್ದು ಸೂಕ್ಷ್ಮವಾಗಿ ಕೇಳಿಸಿಕೊಂಡಾಗ ಇದು ಸುಲಭವಾಗುತ್ತದೆ ಎಂದರು.
ನಾವಿರುವ ಸ್ಥಳವೇ ಒಂದು ರಾಶಿಚಕ್ರ; ಇದನ್ನು ಭೂಮಿಚಕ್ರ ಎಂದೂ ಕರೆಯುತ್ತಾರೆ. ದೈವಜ್ಞರ ಸುತ್ತ ಗ್ರಹಮಂಡಲವೇ ಇರುತ್ತದೆ. ರಾಶಿಚಕ್ರದ ಯಾವ ಭಾಗದಿಂದ ಒಂದು ಪ್ರಶ್ನೆ ಬಂದಿದೆ ಎಂದು ತಿಳಿದುಕೊಂಡರೆ ಆ ಪ್ರಶ್ನೆಯನ್ನು ವಿಶ್ಲೇಷಿಸಬಹುದು. ಪ್ರಶ್ನೆ ಬಂದ ಸ್ಥಳವನ್ನು ಲಗ್ನ ಎಂದು ತಿಳಿಯಬೇಕು ಎಂದರು.ಯಾವುದೇ ಪ್ರಶ್ನೆಗಳು ಉದ್ಭವಿಸಿದರೆ, ಆ ಕಾಲದ ಗ್ರಹಸ್ಥಿತಿಯಿಂದ ಇದಕ್ಕೆ ಉತ್ತರ ಲಭಿಸುತ್ತದೆ. ಕ್ಷಿಪ್ರಫಲ ಚಿಂತನೆಗೆ, ಸೀಮಿತ, ಸಂಕ್ಷಿಪ್ತ ಫಲಕ್ಕೆ ಇದು ಸೂಕ್ತ. ಇದು ಪ್ರಕೃತಿ, ಆ ಕಾಲಘಟ್ಟದ ಗ್ರಹಸ್ಥಿತಿ, ಇದರಲ್ಲಿ ಬದಲಾವಣೆಯಾಗದು ಎಂದರು.
ರಾಘವೇಂದ್ರ ಭಾರತೀ ಸ್ವಾಮೀಜಿಯವರ ಜೀವನ ಸಾಧನೆಗಳ ಅನಾವರಣ ಮಂಗಳವಾರ ನಡೆದಿದೆ. 32ನೇ ಗುರುಗಳ ಕಾಲದಲ್ಲಿ ಮಠ ಅತ್ಯುನ್ನತ ಮಟ್ಟ ತಲುಪಿತ್ತು. ಶಿಷ್ಯರಲ್ಲದವರೂ, ಬ್ರಿಟಿಷರು ಕೂಡಾ ರಾಘವೇಂದ್ರ ಭಾರತೀ ಸ್ವಾಮಿಗಳನ್ನು ರಾಜಮರ್ಯಾದೆಯಿಂದ ಗೌರವಿಸಿದ್ದರು. ಅಷ್ಟರ ಮಟ್ಟಿಗೆ ಮಠವನ್ನು, ಧರ್ಮವನ್ನು ಅತ್ಯುನ್ನತ ಸ್ಥಿತಿಗೆ ಒಯ್ದವರು. ಹಿರಿಯ ದೈವಜ್ಞರಾದ ಮಿತ್ತೂರು ಕೇಶವ ಭಟ್ಟರು ಅವರಿಂದ ಅನಾವರಣ ನಡೆದಿರುವುದು ಅತ್ಯಂತ ಅರ್ಥಪೂರ್ಣ ಎಂದರು.ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಶ್ರೀಮಠದ ಲೋಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.