ಮಳೆ ಅವಾಂತರ: ಹುಲಸೂರಲ್ಲಿ ಬೆಳೆ ಹಾನಿ

| Published : Sep 04 2024, 01:48 AM IST

ಸಾರಾಂಶ

ಹೊಲದಲ್ಲಿ ನೀರು ನಿಂತು ಬೆಳೆ ನಾಶ. ಕೈ ಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಸ್ಥಿತಿ. ನಿರಂತರ ಮಳೆ ಒಂದೆಡೆಯಾದರೆ ದುಬಾರಿ ಕೃಷಿ ಕಾರ್ಮಿಕರ ಖರ್ಚು ಇನ್ನೊಂದೆಡೆ.

ಕನ್ನಡಪ್ರಭ ವಾರ್ತೆ ಹುಲಸೂರ

ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಾದ್ಯಂತ ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಬಹುತೇಕ ರೈತರ ಉದ್ದು, ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿದ್ದು ಗದ್ದೆಯಲ್ಲಿ ಮಳೆ ನೀರು ನಿಂತು ಕಾಯಿಗಳಲಿಯೇ ಮೊಳಕೆ ಒಡೆದಿದೆ. ನಿರಂತರ ಮಳೆ ಒಂದೆಡೆಯಾದರೆ ದುಬಾರಿ ಕೃಷಿ ಕಾರ್ಮಿಕರ ಖರ್ಚು ಇನ್ನೊಂದೆಡೆ. ಈ ಎಲ್ಲದರ ಪರಿಣಾಮವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುವಂತಾಗಿದೆ ರೈತರ ಸ್ಥಿತಿ.

ಹುಲಸೂರಿನ ರೈತ ಮಹಿಳೆ ನಾಗಮ್ಮ ಈರಣ್ಣ ಮೇತ್ರೆಯವರ ಎರಡು ಎಕರೆ ಜಮೀನಿನಲ್ಲಿ 25 ಸಾವಿರ ರು. ಖರ್ಚು ಮಾಡಿ ಉದ್ದು ಸಾಲುಗಳಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಮಳೆ ಬಂದು ಉತ್ತಮ ಬೆಳೆ ಬಂದಿತು. ಉದ್ದು ಕಟಾವಿನ ಹಂತಕ್ಕೆ ಬಂದಿದ್ದರಿಂದ ಕಳೆದ ಐದು ದಿನಗಳ ಹಿಂದೆ ಕೃಷಿ ಕಾರ್ಮಿಕರಿಗೆ ಕೂಲಿ ಕೊಟ್ಟು ಕಟಾವು ಮಾಡಿ ಇನ್ನೇನು ರಾಶಿ ಮಾಡೋಣ ಎನ್ನುವಷ್ಟರಲ್ಲಿ ನಿರಂತರವಾಗಿ ಮಳೆ ಆರಂಭವಾಗಿದ್ದು ಹೊಲದಲ್ಲಿ ಮಳೆ ನೀರು ನಿಂತು ಬೆಳೆಯ ಕಾಯಿಗಳಲ್ಲಿ ಮೊಳಕೆ ಒಡೆದು ಹಾಳಾಗಿದೆ.

ಓಂಕಾರ ಗುರುಬಸಪ್ಪ ದೆಟ್ನೆ ತಮ್ಮ ಎರಡು ಎಕರೆ ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿದ್ದು ಗದ್ದೆಯಲ್ಲಿನ ಹೆಸರು ಬೆಳೆಯ ಪೈರಿನಲ್ಲಿ ಮಳೆ ನೀರು ನಿಂತು ಕಾಯಿಗಳಲಿಯೇ ಮೊಳಕೆ ಒಡೆದು ಎರಡು ಎಕರೆ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಗಂಡನ ಕಳೆದುಕೊಂಡ ನಾನು ಇರುವ 2 ಎಕರೆ ಜಮೀನಿನಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ ನನಗೆ 8 ರಿಂದ 10 ಪಾಕೆಟ್ ಉದ್ದು ಬರುವ ಸಾಧ್ಯತೆ ಇತ್ತು. ಆದರೆ ನಿರಂತರ ಸುರಿದ ಮಳೆಯಿಂದಾಗಿ ಈಗ ಸಂಪೂರ್ಣ ಮೊಳಕೆ ಒಡೆದು ಹಾಳಾಗಿದೆ. ಇದಕ್ಕೆ ಸರ್ಕಾರ ಪರಿಹಾರ ನೀಡುವ ಮೂಲಕ ನನ್ನ ಜೀವನಕ್ಕೆ ನೆರವು ನೀಡಬೇಕು.

-ನಾಗಮ್ಮ ಈರಣ್ಣ ಮೇತ್ರೆ, ರೈತ ಮಹಿಳೆ, ಹುಲಸೂರ.

ಮುಂಗಾರು ಹಂಗಾಮಿನ ಬಿತ್ತನೆಯಾದ ಉದ್ದು, ಹೆಸರು ಕಟಾವು ಹಂತಕ್ಕೆ ಬಂದಿದ್ದು, ಆದರೆ ನಿರಂತರ ಸುರಿದ ಮಳೆ ಕಾರಣ ಬೆಳೆ ಹಾನಿಯಾಗಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ರೈತರಿಗೆ ಪರಿಹಾರ ನೀಡುವಂತೆ ವರದಿ ನೀಡುತ್ತೇವೆ.

- ಗೌತಮ, ಸಹಾಯಕ ಕೃಷಿ ನಿರ್ದೇಶಕರು, ಬಸವಕಲ್ಯಾಣ/ಹುಲಸೂರ