ಸಾರಾಂಶ
- ಹಿರಿಯ ಶಾಸಕ ಆರ್‌ವಿಡಿ ಸಿಎಂ ಆಸೆ ಹೇಳಿಕೆಗೆ ದರ್ಶನಾಪುರ ಟಾಂಗ್
- ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ-------ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿ ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯ ಬಿಟ್ಟು ಬೇರೆಯವರು ಸಿಎಂ ಆಗುವ ಪ್ರಶ್ನೆಯೇ ಉದ್ಭವವಾಗಲ್ಲ ಎಂದೆನ್ನುವ ಮೂಲಕ, ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಆರ್. ವಿ. ದೇಶಪಾಂಡೆ ಅವರ ಹೇಳಿಕೆಗೆ ಟಾಂಗ್ ನೀಡಿದರು.ಆರ್. ವಿ. ದೇಶಪಾಂಡೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಚಾರಕ್ಕೆ ಯಾದಗಿರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ಮಾಡುವ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬೇಡ ಅಂದಾಗ ಮಾತ್ರ ಬೇರೆಯವರು ಸಿಎಂ ಆಗುವ ಬಗ್ಗೆ ವಿಚಾರ ಮಾಡಬೇಕಾಗುತ್ತದೆ, ಅಲ್ಲೀವರೆಗೆ ಬೇರೆಯವರು ಸಿಎಂ ಆಗುವ ಪ್ರಶ್ನೆಯೇ ಉದ್ಭವಿಸಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡಾ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ, ಹಸ್ತಕ್ಷೇಪವೂ ಮಾಡಿಲ್ಲ. ಸಿದ್ಧರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುವುದಾಗಿ ದೇಶಪಾಂಡೆ ಹೇಳಿದ್ದಾರೆ ಅದನ್ನು ಯಾರೂ ತಿರುಚಬಾರದು ಎಂದರು.
ಇನ್ನು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದರ್ಶನಾಪುರ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷದ ಬಗ್ಗೆ ಶಾಸಕ ರವಿ ಗಣಿಗ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.ಬಿಜೆಪಿ ಯಾವಾಗಲೂ ಹಿಂಬಾಗಿಲ ಮೂಲಕ ಸರಕಾರ ರಚಿಸಿದೆ, ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದ ಸರಕಾರ ಜನರು ನೀಡಿಲ್ಲ. ಮುಂದೆಯೂ ಕೂಡ ಬಿಜೆಪಿಗೆ ಸ್ಪಷ್ಟ ಬಹುಮತದ ಸರಕಾರ ಜನ ಕೊಡಲ್ಲ ಎಂದ ಅವರು, ಬಿಜೆಪಿನವರು ನಮಗೆ ಯಾವುದೇ ಸಂಪರ್ಕ ಮಾಡಿ ಮಾತನಾಡಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ಬಹಳಷ್ಟು ಲೂಟಿ ಮಾಡಿದ್ದಾರೆ. ಹೀಗಾಗಿ, ಬಿಜೆಪಿನವರು ನೂರು ಕೋಟಿ ಕೊಡುತ್ತಾರೆ ಎಷ್ಟಾದರೂ ಹಣ ಕೊಡುತ್ತಾರೆ, ಎಷ್ಟೇ ಆಫರ್ ಮಾಡಿದರೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲ್ಲ ಎಂದರು.ಇನ್ನು,
ನಟ, ಆರೋಪಿ ದರ್ಶನ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಮಾಧ್ಯಮಗಳು ದರ್ಶನ ಅವರ ಬಗ್ಗೆಯೇ ಸುದ್ದಿ ಮಾಡುತ್ತಿವೆ. ಬಿಜೆಪಿ ಹಗರಣಗಳ ಬಗ್ಗೆ ಮಾಡಲ್ಲ. ದರ್ಶನ್ ಕೊಲೆ ಮಾಡಿದ್ದಾನೋ ಇಲ್ಲವೋ, ಅದು ತನಿಖೆಯಲ್ಲಿ ಗೊತ್ತಾಗುತ್ತದೆ. ನ್ಯಾಯಾಲಯ ತೀರ್ಪು ನೀಡುತ್ತದೆ. ಆದರೆ, ಮಾಧ್ಯಮಗಳು ಆತನ ಬಗ್ಗೆ ಅತಿಯಾಗಿ ತೋರಿಸುತ್ತಿವೆ ಎಂದರು.----