ಪಟ್ಟಣ ಸವಾಲುಗಳು ನೂರಾರು, ಬಗೆಹರಿಸುವರೆ ಹೊಸಬರು?

| Published : Sep 04 2024, 01:52 AM IST

ಸಾರಾಂಶ

ಕಳೆದ ಹಲವು ವರ್ಷಗಳಿಂದ ಅಧ್ಯಕ್ಷರ ಮೀಸಲಾತಿ ಗೊಂದಲದಿಂದ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ. ಹೀಗಾಗಿ ಕಳೆದ ವಾರದ ಹಿಂದಷ್ಟೇ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಸೆ.4 ರಂದು ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ಕೆರೆಯಲಾಗಿದೆ. ಆದರೆ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮುಂದೆ ಪಟ್ಟಣದ ಅಭಿವೃದ್ಧಿಯ ಹಲವು ಸಮಸ್ಯೆ, ಸವಾಲುಗಳಿವೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಕಳೆದ ಹಲವು ವರ್ಷಗಳಿಂದ ಅಧ್ಯಕ್ಷರ ಮೀಸಲಾತಿ ಗೊಂದಲದಿಂದ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ. ಹೀಗಾಗಿ ಕಳೆದ ವಾರದ ಹಿಂದಷ್ಟೇ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಸೆ.4 ರಂದು ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ಕೆರೆಯಲಾಗಿದೆ. ಆದರೆ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮುಂದೆ ಪಟ್ಟಣದ ಅಭಿವೃದ್ಧಿಯ ಹಲವು ಸಮಸ್ಯೆ, ಸವಾಲುಗಳಿವೆ. ಅವುಗಳನ್ನು ಬಗೆಹರಿಸಿ ಜನರ ಸಂಕಷ್ಟಗಳಿಗೆ ಆಸರೆಯಾಗುತ್ತಾರಾ ಎಂಬ ಪ್ರಶ್ನೆ ನಗರ ನಿವಾಸಿಗಳನ್ನು ಕಾಡುತ್ತಿದೆ.

2013ರಲ್ಲಿ ಇದ್ದ ಇಂಡಿ ನಗರದ ಸೌಂದರ್ಯದ ಸ್ಥಿತಿ ಇಂದು ಇಲ್ಲದಂತಾಗಿದೆ. ಕಳೆದೆರಡು ವರ್ಷಗಳಲ್ಲಿ ನಗರದ ಅಭಿವೃದ್ಧಿ ಯಾವ ದುಸ್ಥಿತಿ ಬಂದಿದೆ ಎಂಬುವುದನ್ನು ಸಿಂಹಾವಲೋಕನ ಮಾಡಬೇಕು. ಮುಂದಿನ ಅಭಿವೃದ್ಧಿಯ ಕನಸು ಹೇಗಿರಬೇಕು ಎನ್ನುವುದನ್ನು ಜನರಿಗೆ ತೋರಿಸಬೇಕಾಗಿದೆ.ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಯತ್ನದಿಂದ ನಗರಕ್ಕೆ 24/7 ಶುದ್ಧ ಕುಡಿಯುವ ನೀರು ಲಭಿಸಲಾಗಿದೆ. ಆದರೆ, ನೀರು ಪೋಲಾಗದಂತೆ ಕ್ರಮಕೈಗೊಳ್ಳುವ ರೂಪುರೇಷೆ ಹಾಕಿಕೊಳ್ಳಬೇಕಾಗಿದೆ. ಪಟ್ಟಣದ ಮುಖ್ಯರಸ್ತೆಗಳ ಬದಿಯಲ್ಲಿ ಮಣ್ಣು ತುಂಬುತ್ತಿದ್ದು, ವಾರಕ್ಕೊಮ್ಮೆಯಾದರೂ ಮಣ್ಣು ತೆರವುಗೊಳಿಸುವ ಕೆಲಸ ನಡೆಯಬೇಕಿದೆ. ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಗರದ ಪ್ರತಿ ವಾರ್ಡ್‌ಗಳಲ್ಲಿ ಒಳಚರಂಡಿ ಗುಂಡಿಗಳು ತುಂಬಿ ಹೊರಗೆ ಹರಿಯುತ್ತಿದ್ದು, ಜನರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಅದು ಸುಧಾರಣೆಯಾಗಬೇಕಾಗಿದೆ.ನಗರದ ಸೌಂದರ್ಯ ಹೆಚ್ಚಿಸುವ ಪುಟ್ಟಪಾತ್‌ ಮೇಲೆ ಹಣ್ಣು ಮತ್ತು ಹೂವಿನ ವ್ಯಾಪಾರವನ್ನು ಮಾಡುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆ, ಅನೈರ್ಮಲ್ಯ ಎದ್ದು ಕಾಣುತ್ತಿದ್ದು ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥಿತ ನೆಲೆ ನೀಡಬೇಕು. ಪುರಸಭೆ ಹಾಗೂ ಪೊಲೀಸ್‌ರು ನಗರದ ಸಂಚಾರ ವ್ಯವಸ್ಥೆಯ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ಹಾಗೂ ರೈಲು ನಿಲ್ದಾಣಕ್ಕೆ ತೆರಳುವ ಆಪೇ ಅಟೋಗಳು ಪಟ್ಟಣದ ಪ್ರಮುಖ ರಸ್ತೆಯ ಮೇಲೆ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಈ ಪರಿಸ್ಥಿತಿ ಅಧಿಕಾರಿಗಳು ಕಣ್ಣಿಗೆ ಕಂಡರೂ ಜಾಣಕುರುಡ ಪ್ರದರ್ಶಿಸುತ್ತಿದ್ದಾರೆ. ನಗರದಲ್ಲಿನ ಅಪರಾಧಿಕ ಚಟುವಟಿಕೆ ಹಾಗೂ ಸುಗಮ ಸಂಚಾರಕ್ಕಾಗಿಯೇ ಪ್ರತ್ಯೇಕ ಶಹರ ಪೊಲೀಸ್‌ ಠಾಣೆ ಇದೆ. ಪುರಸಭೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಸುಗಮ ಸಂಚಾರ ಒದಗಿಸುವುದರ ಜೊತೆಗೆ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ. ನಗರದಲ್ಲಿ ನಡೆದಿರುವ ನಗರೋತ್ಥಾನ ಯೋಜನೆ ಕಾಮಗಾರಿಗಳು ಸಮರ್ಪಕವಾಗಿ,ಗುಣಮಟ್ಟದಿಂದ ನಡೆಯುವಂತೆ ನಿತ್ಯ ನಿಗಾವಹಿಸಬೇಕಾಗಿದೆ.ಪುರಸಭೆಗೆ ಈ ಹಿಂದೆ ಅಧ್ಯಕ್ಷರಾದವರು ಕೆಲ ತಿಂಗಳು ಮಾತ್ರ ನಗರ ಪ್ರದಕ್ಷಣೆ ಹಾಕಿ ಕೈತೊಳೆದುಕೊಂಡಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರು ನಗರ ಪ್ರದಕ್ಷಣೆ ಹಾಕಿ ಪ್ರತಿ ವಾರ್ಡ್‌ಗಳ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ನಗರದ ಸಾರ್ವಜನಿಕರು ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿದ್ದು, ನಗರವಾಸಿಗಳ ಆಸೆಗಳನ್ನು ಈಡೇರಿಸುವ ಕೆಲಸ ಮೊದಲ ಸಾಮಾನ್ಯ ಸಭೆಯಿಂದಲೇ ಆರಂಭಗೊಳ್ಳಲಿ ಎಂಬುವುದು ಸಾರ್ವಜನಿಕರ ಆಶಯ.

ಶಾಸಕ ಯಶವಂತರಾಯಗೌಡ ಪಾಟೀಲರ ಮಾರ್ಗದರ್ಶನದಲ್ಲಿ ಪುರಸಭೆಯ ಎಲ್ಲ ಸದಸ್ಯರ ಸಹಕಾರದಿಂದ ನಗರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಗರವಾಸಿಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ.

-ಲಿಂಬಾಜಿ ರಾಠೋಡ, ಪುರಸಭೆ ಅಧ್ಯಕ್ಷ, ಇಂಡಿ.

ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ. ಶಾಸಕರು ಸರ್ಕಾರದಿಂದ ತರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ನಗರವಾಸಿಗಳು ಪುರಸಭೆಗೆ ಕಟ್ಟುವ ತೆರಿಗೆ ಹಣ ದುರುಪಯೋಗವಾಗದ ರೀತಿಯಲ್ಲಿ ಗಮನ ಹರಿಸಿ, ನಗರದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

-ಜಹಾಂಗೀರ ಸೌದಾಗರ, ಉಪಾಧ್ಯಕ್ಷರು ಪುರಸಭೆ, ಇಂಡಿ.