ಸಾರಾಂಶ
ವಾರಸಾ ದಾಖಲಿಸುವ ವಿಚಾರವಾಗಿ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತ ಅಧಿಕಾರಿ) ಎಸ್.ಫಕಿರೇಶ ಅವರ ಮೇಲೆ ಅದೇ ಗ್ರಾಮದ ಮುಲ್ತಾನಿ ಎನ್ನುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ವಾರಸಾ ದಾಖಲಿಸುವ ವಿಚಾರವಾಗಿ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತ ಅಧಿಕಾರಿ) ಎಸ್.ಫಕಿರೇಶ ಅವರ ಮೇಲೆ ಅದೇ ಗ್ರಾಮದ ಮುಲ್ತಾನಿ ಎನ್ನುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಕಚೇರಿಯಲ್ಲಿ ಕರ್ತವ್ಯ ನಿರತ ಫಕಿರೇಶ ಅವರನ್ನು ಭೇಟಿಯಾದ ಮುಲ್ತಾನಿ ತಮ್ಮ ಹೆಸರಿಗೆ ವಾರಸಾ ಮಾಡಲು ಮನವಿ ಮಾಡಿದ್ದಾರೆ. ಈ ವೇಳೆ ಫಕಿರೇಶ ಅಗತ್ಯ ದಾಖಲೆ ಪರಿಶೀಲಿಸಿ ವಾರಸಾ ಮಾಡಿಕೊಡುವುದಾಗಿ ಹೇಳಿದ್ದರು. ವಾರಸಾ ಮಾಡಿಕೊಡಲು ತಲಾಠಿ ಫಕಿರೇಶ ಕೆಲವು ದಿನಗಳಿಂದ ಇಲ್ಲಸಲ್ಲದ ನೆಪವೊಡ್ಡಿ ಕಾಲಹರಣ ಮಾಡಿ ಸತಾತಯಿಸುತ್ತಿರುವುದಕ್ಕೆ ಮುಲ್ತಾನಿ ಆಕ್ಷೇಪಿಸಿ ಗದರಿಸಿದ್ದು, ಈ ವೇಳೆ ಪರಸ್ಪರರಲ್ಲಿ ವಾಗ್ವಾದ ನಡೆದಿದೆ. ಒಂದು ಹಂತದಲ್ಲಿ ತಲಾಠಿ ಫಕಿರೇಶ ಅವರು ಮುಲ್ತಾನಿ ಅವರೊಂದಿಗೆ ಅಸಭ್ಯ ಮತ್ತು ಉದ್ಧಟತನವಾಗಿ ವರ್ತಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
ಮುಲ್ತಾನಿ ಅವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿರುವ ಫಕಿರೇಶ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಕೇಶ್ವರ ಠಾಣೆ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗುತ್ತಿದೆ.ಗಲಾಟೆ ವಿಷಯ ತಿಳಿದು ಉಪತಹಸೀಲ್ದಾರ್ ಸಿ.ಎ. ಪಾಟೀಲ, ಸಂಕೇಶ್ವರ ಹೋಬಳಿಯ ಕಂದಾಯ ನಿರೀಕ್ಷಕ ಎ.ಎಂ. ಕಮತನೂರ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ತಹಸೀಲ್ದಾರ್ ಮಂಜುಳಾ ನಾಯಕ ಅವರನ್ನು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ತಡರಾತ್ರಿವರೆಗೂ ಪ್ರಕರಣ ದಾಖಲಾಗಿಲ್ಲ.