ಸಾರಾಂಶ
ಸ್ಮಶಾನ ಜಾಗಕ್ಕೆ ಒತ್ತಾಯಿಸಿ ತಾಲೂಕಿನ ಹಳ್ಳೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಕಟ್ಟಿಗೆ ಹಾಕಿ ಶವ ಸಂಸ್ಕಾರಕ್ಕೆ ಮುಂದಾದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ಮಶಾನ ಜಾಗಕ್ಕೆ ಒತ್ತಾಯಿಸಿ ತಾಲೂಕಿನ ಹಳ್ಳೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಕಟ್ಟಿಗೆ ಹಾಕಿ ಶವ ಸಂಸ್ಕಾರಕ್ಕೆ ಮುಂದಾದ ಘಟನೆ ನಡೆದಿದೆ.ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಮೀಸಲಾಗಿದ್ದ ದಾನದ ಜಮೀನು ವಿವಾದೊಕ್ಕೊಳಗಾದ ಹಿನ್ನೆಲೆ ಗ್ರಾಮದಲ್ಲೀಗ ಶವಸಂಸ್ಕಾರಕ್ಕೆ ಸಮಸ್ಯೆ ಎದುರಾಗಿದೆ. ಗ್ರಾಮ ಪಂಚಾಯಿತಿ ಶವಸಂಸ್ಕಾರಕ್ಕೆ ಜಾಗ ಮೀಸಲಿಡಲು ಆಗ್ರಹಿಸಿ ಗ್ರಾಮಸ್ಥರು ಪಂಚಾಯಿತಿ ಮುಂದೆ ಶವಸಂಸ್ಕಾರಕ್ಕೆ ಕಟ್ಟಿಗೆ ಹಾಕಿ ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಬುಧವಾರ ಮೃತಪಟ್ಟ ಸಂಗನಗೌಡ ಮೇಟಿ ಉರ್ಫ್ ಮುಗಳೊಳ್ಳಿ ಅವರ ಶವಸಂಸ್ಕಾರಕ್ಕೆ ಜಾಗದ ಸಮಸ್ಯೆಯಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಯಿತು. ಸ್ಥಳಕ್ಕೆ ತಹಸೀಲ್ದಾರ್ ಮತ್ತು ಪೊಲೀಸರು ಆಗಮಿಸಿ ಗ್ರಾಮಸ್ಥರ ನಡುವೆ ಸಂಧಾನ ಮಾತುಕತೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಅಧಿಕಾರಿಗಳ ನಡುವೆ ಜಟಾಪಟಿ ನಡೆದು ಕೊನೆಗೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು. ಸದ್ಯ ವಿವಾದಿತ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು. ವಿವಾದಿತ ಜಾಗದ ಕುರಿತು ವಿಚಾರಣೆ ಆಗಸ್ಟ್ 23ರಂದು ನ್ಯಾಯಾಲಯದಲ್ಲಿ ನಡೆಯಲಿದ್ದು, ಬಳಿಕವಷ್ಟೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.