ಮೂಲ್ಕಿ: ಅಂಚೆ ಜನ ಸಂಪರ್ಕ ಅಭಿಯಾನ, ಆಧಾರ್ ಪರಿಷ್ಕರಣ ಶಿಬಿರ

| Published : Aug 22 2025, 02:00 AM IST

ಸಾರಾಂಶ

ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಹಾಗೂ ಉಚಿತ ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರ ಇತ್ತೀಚೆಗೆ ನಡೆಯಿತು.

ಮೂಲ್ಕಿ: ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಬ್ಯಾಂಕ್ ವ್ಯವಹಾರ, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನ, ಪಿಂಚಣಿ ಸೇರಿದಂತೆ ಪ್ರತಿಯೊಂದಕ್ಕೂ ಅವಶ್ಯ ದಾಖಲೆಯಾಗಿದೆ. ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಿರುವುದು ಪ್ರಯೋಜನಕಾರಿ ಎಂದು ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಹೇಳಿದರು.

ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಲಾದ ಅಂಚೆ ಜನ ಸಂಪರ್ಕ ಅಭಿಯಾನ ಹಾಗೂ ಉಚಿತ ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಸಮಾಜದಲ್ಲಿ ಹಿರಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಆಧಾರ್ ತಿದ್ದುಪಡಿ ಅಥವಾ ನೋಂದಣಿ ಕೇಂದ್ರಕ್ಕೆ ಹೋಗುವುದು ಕೆಲವೊಮ್ಮೆ ಕಷ್ಟಕರವಾಗುತ್ತಿದ್ದು, ಇಂತಹ ಶಿಬಿರಗಳು ಆ ತೊಂದರೆ ನಿವಾರಿಸುತ್ತವೆ ಎಂದು ಹೇಳಿದರು.

ಶಿಬಿರದಲ್ಲಿ ಹೊಸ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಮೊಬೈಲ್ ನಂಬರ್ ಹಾಗೂ ಇತರ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು. ಅಂಚೆ ಇಲಾಖೆಯ ವಿಮೆ ಸೇವೆ ಸ್ಥಳದಲ್ಲೇ ನೀಡಲಾಯಿತು.

ಶಿಮಂತೂರಿನ ಶ್ರೀ ಶಾರದ ಸೊಸೈಟಿ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ನಿರ್ದೇಶಕ ಸುರೇಶ್ ರಾವ್ ನಿರಳಿಕೆ, ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನಾ, ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಸದಸ್ಯರಾದ ಆನಂದ ಮೇಲಂಟ, ಶಶಿಕರ ಕೆರೆಕಾಡು, ದಾಮೋದರ ಶೆಟ್ಟಿ ಕೊಡೆತ್ತೂರು, ಶೋಭಾ ರಾವ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಜನ ವಿಕಾಸ ಸಮಿತಿ ಮೂಲ್ಕಿಯ ಸದಸ್ಯ ಪ್ರಾಣೇಶ್‌ ಭಟ್‌ ದೇಂದಡ್ಕ ವಂದಿಸಿದರು. ಶಾಲೆಯ ಪ್ರಾಚಾಯ ಜಿತೇಂದ್ರ ವಿ. ರಾವ್‌ ಹೆಜಮಾಡಿ ನಿರೂಪಿಸಿದರು.