ಕನ್ನಡಪ್ರಭ ವಾರ್ತೆ ಬೆಂಗಳೂರು ನಾಗರಬಾವಿ ಸಮೀಪದ ಮಲ್ಲತ್ತಹಳ್ಳಿಯ ಮುದ್ದಿನಪಾಳ್ಯ ಮುಖ್ಯರಸ್ತೆಯಲ್ಲಿ ಒಟ್ಟು 1.85 ಲಕ್ಷ ಚ.ಅಡಿ ವಿಸ್ತೀರ್ಣದಲ್ಲಿ ಆರಂಭವಾಗಿರುವ ‘ಸುಕಾ ಬ್ರೂವೆರಿ ಮತ್ತು ಕಿಚನ್’ ಕಟ್ಟಡ ಸಂಪೂರ್ಣ ಅನಧಿಕೃತ ಎಂದು ಆಪಾದಿಸಿರುವ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ಅವರು ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶಾನಲಯಕ್ಕೆ (ಇಡಿ) ದೂರು ನೀಡಿದ್ದಾರೆ.

ಅತ್ಯಂತ ಪ್ರಭಾವಿ ವ್ಯಕ್ತಿಗಳಿಬ್ಬರ ಮಾಲೀಕತ್ವದ ಈ ಅನಧಿಕೃತ ಕಟ್ಟಡಕ್ಕೆ ಸಂಬಂಧಿಸಿದಂತೆ ಜಿಬಿಎಯ ನಗರ ಯೋಜನೆ ಇಲಾಖೆ, ಆರೋಗ್ಯ ಇಲಾಖೆ, ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಹಾಗೂ ಅಬಕಾರಿ ಇಲಾಖೆಗಳಲ್ಲಿರುವ ಒಂಬತ್ತು ಅಧಿಕಾರಿಗಳು ಕೋಟ್ಯಂತರ ರು. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅವರ ಹೆಸರುಗಳ ಸಮೇತ ದೂರು ದಾಖಲಿಸಿದ್ದಾರೆ.ಗುರುವಾರ ದಾಖಲೆಗಳ ಸಮೇತ ದೂರು ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಮೇಶ್, ಎರಡು ಪ್ರತ್ಯೇಕ ಸ್ವತ್ತುಗಳಲ್ಲಿ ಎರಡು ಪ್ರತ್ಯೇಕ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಎರಡು ಪ್ರತ್ಯೇಕ ನಕ್ಷೆ ಮಂಜೂರಾತಿಗಳನ್ನು ಪಡೆದಿದ್ದರೂ ಸಹ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ. ನಕ್ಷೆ ಮಂಜೂರಾತಿ ಶುಲ್ಕವನ್ನು ಆಯುಕ್ತರ ಖಾತೆಗೆ ಜಮೆ ಮಾಡದೇ ಅಧಿಕಾರಿಗಳು ತಮ್ಮ ಮನೆಗೇ ಕೊಂಡೊಯ್ದಿದ್ದಾರೆ ಎಂದರು.

ಸುಮಾರು 2000 ಜನ ಆಸೀನರಾಗಬಹುದಾದಂಥ ವ್ಯವಸ್ಥೆ ಹೊಂದಿದೆ ಎಂದು ಪ್ರಚಾರ ಮಾಡಿಕೊಂಡಿದ್ದರು. ಇಂತಹ ಅನಧಿಕೃತ ಬೃಹತ್ ಕಟ್ಟಡಕ್ಕೆ ಪಾಲಿಕೆಯಿಂದ ಸಿ.ಸಿ. ಮತ್ತು ಒ.ಸಿ. ನೀಡಿಲ್ಲ. ಕಾನೂನು ಬಾಹಿರವಾಗಿ ವಿದ್ಯುತ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಜತೆಗೆ ಕಾನೂನು ಗಾಳಿಗೆ ತೂರಿ ಅಬಕಾರಿ ಇಲಾಖೆ ಸಿಎಲ್‌-7 ಪರವಾನಗಿ ನೀಡಿದೆ. ಈ ಕಾನೂನು ಬಾಹಿರ ಕಾರ್ಯ ಮತ್ತು ಬೃಹತ್ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು. ಈ ಬೃಹತ್ ಅನಧಿಕೃತ ಕಟ್ಟಡಕ್ಕೆ ಕಲ್ಪಿಸಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಬೇಕು. ಕುಡಿಯುವ ನೀರು, ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸಬೇಕು. ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸೇಕು. ಸಿಎಲ್‌-7 ಪರವಾನಗಿಯನ್ನು ಹಿಂಪಡೆಯಬೇಕು ಎಂದು ರಮೇಶ್‌ ಒತ್ತಾಯಿಸಿದರು.