ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಸ್ತೆಗಳ ತುಂಬೆಲ್ಲ ಗುಂಡಿಗಳನ್ನು ಮುಚ್ಚದ ಪರಿಣಾಮ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೇ ಸಾಕು ಸವಾರರಿಗೆ ಅಪಾಯ ತಪ್ಪಿದ್ದಲ್ಲ. ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಜನದಟ್ಟಣೆಯ ರಸ್ತೆಗಳಲ್ಲಿಯೇ ಹಲವಾರು ಬೃಹದಾಕಾರದ ಗುಂಡಿಗಳು ಕಾಣಿಸುತ್ತಿವೆ. ಈಗಾಗಲೇ ವೈಭವ ಚಿತ್ರ ಮಂದಿರ, ಬಸ್ ನಿಲ್ದಾಣ ಹತ್ತಿರ ರಸ್ತೆಯ ನಡುವೆ ಮತ್ತು ಎಲ್ಲೆಡೆ ತುಂಬಿರುವ ತಗ್ಗಿನಲ್ಲಿ ಬಿದ್ದು ಬೈಕ್ ಅಪಘಾತಗಳಾಗಿವೆ. ನೂಲಿನ ಗಿರಣಿಯಿಂದ ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆಯಿಂದ ಮಹಾಲಿಂಪೂರ ನಾಕಾ, ರಬಕವಿ ಬಸ್ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ.ಗುಂಡಿಗಳಿಂದ ಅವಾಂತರ:ಮಳೆಗಾಲ ಸಂದರ್ಭದಲ್ಲಂತೂ ಸಣ್ಣ ಪುಟ್ಟ ತೆಗ್ಗುಗಳು ಬೃಹತ್ ಗುಂಡಿಗಳಾಗಿ ಮಾರ್ಪಾಡುಗುತ್ತಿವೆ. ಇವೇ ಗುಂಡಿಗಳು ಮಳೆ ನೀರಿನಿಂದ ತುಂಬಿಕೊಂಡು ನಿಲ್ಲುತ್ತಿರುವುದರಿಂದ ರಸ್ತೆಗಳಲ್ಲಿನ ಗುಂಡಿಗಳು ಕಾಣಿಸುವುದಿಲ್ಲ. ವಾಹನ ಚಾಲಕರು ಗುಂಡಿಗಳನ್ನು ಕಾಣದೇ ಅಪಘಾತಕ್ಕೀಡಾಗುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಂಭೀರ ಗಾಯಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ.
ಕೆಲವೆಡೆ ಪೊಲೀಸರು ಅಪಘಾತ ಸಂಭವಿಸದಂತೆ ಗುಂಡಿಗಳ ಸುತ್ತ ಬ್ಯಾರಿಕೇಡ್ ಹಾಕುತ್ತಿದ್ದಾರೆ. ರಸ್ತೆಗಳಲ್ಲಿ ತೆಗ್ಗುಗಳು ಕಾಣಿಸುತ್ತಿದ್ದರೂ ಅವುಗಳನ್ನು ಮುಚ್ಚಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸವಾರರು ಆರೋಪಿಸುತ್ತಿದ್ದಾರೆ.ವಾರ್ಡ್‌ಗಳಲ್ಲಿಯೂ ಇದೇ ಸಮಸ್ಯೆ:
ಅವಳಿ ನಗರದ ಎಲ್ಲ ೩೧ ವಾರ್ಡ್‌ಗಳಲ್ಲಿ ನೀರು, ವಿದ್ಯುತ್, ದೂರವಾಣಿ ಸಂಪರ್ಕ ಮತ್ತಿತರ ಕಾರಣಗಳಿಗಾಗಿ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಮಳೆ ನೀರಿಗೆ ಗುಂಡಿಗಳು ಇನ್ನಷ್ಟು ಹೆಚ್ಚಿವೆ. ನಗರಸಭೆ, ಲೋಕೋಪಯೋಗಿ, ನಗರಾಭಿವೃದ್ಧಿ ಹೀಗೆ ಎಲ್ಲ ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಕೊರತೆ ಕಾರಣದಿಂದ ರಸ್ತೆ ದುರಸ್ತಿ, ಸ್ವಚ್ಛತೆ ಕೆಲಸ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.--
ಸಾರ್ವಜನಿಕರ ಆಕ್ರೋಶಮಳೆಗಾಲವಾಗಿದ್ದರಿಂದ ಇದೀಗ ರಸ್ತೆಗಳ ನೈಜ ದರ್ಶನವಾಗುತ್ತಿದೆ. ಕಳಪೆ ಕಾಮಗಾರಿ ಎಷ್ಟಿದೆ ಎಂಬುವುದನ್ನು ಪತ್ತೆ ಹಚ್ಚಲು ಮಳೆಗಾಲವೇ ಬರಬೇಕು. ಇದೀಗ ನಗರದ ರಸ್ತೆಗಳನ್ನು ನೋಡಿದರೆ ರಸ್ತೆಯೋ ಗುಂಡಿಗಳ ಸಾಮ್ರಾಜ್ಯವೋ ಎಂಬಂತೆ ಭಾಸವಾಗುತ್ತಿದೆ. ಅಷ್ಟರ ಮಟ್ಟಿಗೆ ನಗರ ರಸ್ತೆಗಳು ಹಾಳಾಗಿವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
----------ಕೋಟ್...
ತುಂಬಾ ದಿನಗಳಿಂದ ಬೇಡಿಕೆಯಿಂದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರಸ್ತೆ ಸಂಚಾರ ಪ್ರಯಾಣಿಕರಿಗೆ ಮಾರಕವಾಗಿದೆ. ತಕ್ಷಣವೇ ದುರಸ್ತಿ ಕಾರ್ಯವಾಗಬೇಕು.-ಡಾ.ರವಿ ಜಮಖಂಡಿ, ಕಾರ್ಯದರ್ಶಿ, ಅಭಿವೃದ್ಧಿ ಸಮಿತಿ, ರಬಕವಿ-ಬನಹಟ್ಟಿ.