ಆನೆಕೆರೆ ಶಾಲೆಯಲ್ಲಿ ಕೆರೆಗಳ ಕುರಿತು ಅರಿವು ಕಾರ್ಯಕ್ರಮ

| Published : Nov 13 2025, 12:45 AM IST

ಸಾರಾಂಶ

ಐಎಫ್ಎ ಸಂಸ್ಥೆಯು ಕಳೆದ ೨೦ ವರ್ಷಗಳಿಂದಲೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸ್ಥಳೀಯ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಸ್ಥಳೀಯ ಸಂಪನ್ಮೂಲಗಳ ಕಲೆ, ಆಚರಣೆ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ ಕಲಾ ಅಂತರ್ಗತ ಪ್ರಯೋಗವನ್ನು ನಡೆಸುತ್ತಾ ಬಂದಿದೆ. ಇದರ ಭಾಗವಾಗಿ ಕಲಾವಿದರಾದ ನಂದಿನಿ ಡಿ.ಎಂ.ರವರು ನಾವು ಮತ್ತು ಕೆರೆ ಎಂಬ ವಿಷಯವನ್ನು ಇಟ್ಟುಕೊಂಡು ಆನೆಕೆರೆ ಭಾಗದ ಸುತ್ತ ಇರುವಂತಹ ಹಬ್ಬಗಳು, ಆಚರಣೆಗಳು, ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಪಠ್ಯದ ಜೊತೆಗೆ ಅಂತರ್ಗತ ಗೊಳಿಸಿ ಪುಸ್ತಕ ರೂಪದಲ್ಲಿ ಹೊರತರುವಂಥ ಮಹತ್ವದ ಯೋಜನೆಯನ್ನು ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇಂಡಿಯಾ ಫೌಂಡೇಶನ್ ಫಾರ್ ದಿ ಹಾರ್ಟ್ಸ್ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ, ಕಲಿಸು ಕಾರ್ಯಕ್ರಮದ ನಾವು ಮತ್ತು ಕೆರೆ ಎಂಬ ಕಲಾ ಅಂತರ್ಗತ ಪ್ರಯೋಗದ ಉದ್ಘಾಟನೆಯು ತಾಲೂಕಿನ ಆನೆಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಐಎಫ್ಎ ಸಂಸ್ಥೆಯು ಕಳೆದ ೨೦ ವರ್ಷಗಳಿಂದಲೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸ್ಥಳೀಯ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಸ್ಥಳೀಯ ಸಂಪನ್ಮೂಲಗಳ ಕಲೆ, ಆಚರಣೆ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ ಕಲಾ ಅಂತರ್ಗತ ಪ್ರಯೋಗವನ್ನು ನಡೆಸುತ್ತಾ ಬಂದಿದೆ. ಇದರ ಭಾಗವಾಗಿ ಕಲಾವಿದರಾದ ನಂದಿನಿ ಡಿ.ಎಂ.ರವರು ನಾವು ಮತ್ತು ಕೆರೆ ಎಂಬ ವಿಷಯವನ್ನು ಇಟ್ಟುಕೊಂಡು ಆನೆಕೆರೆ ಭಾಗದ ಸುತ್ತ ಇರುವಂತಹ ಹಬ್ಬಗಳು, ಆಚರಣೆಗಳು, ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಪಠ್ಯದ ಜೊತೆಗೆ ಅಂತರ್ಗತ ಗೊಳಿಸಿ ಪುಸ್ತಕ ರೂಪದಲ್ಲಿ ಹೊರತರುವಂಥ ಮಹತ್ವದ ಯೋಜನೆಯನ್ನು ಹೊಂದಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್‌ಡಿಎಂಸಿ ಅಧ್ಯಕ್ಷ ನಂಜುಂಡಸ್ವಾಮಿಯವರು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ನಡೆಯಬೇಕಿದೆ. ಆನೆಕೆರೆ ಗ್ರಾಮವು ವಿಶೇಷವಾದ ಆಚರಣೆಗೆ ಹಾಗೂ ಸಂಪನ್ಮೂಲಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದ ಪಂಚಲಿಂಗೇಶ್ವರ ದೇವಾಲಯ ಹಾಗೂ ಆನೆಕೆರಮ್ಮ ಜಾತ್ರೆಯ ವಿಶೇಷತೆಯನ್ನು ನಾವು ಮಕ್ಕಳಿಗೆ ಇಂತಹ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲು ಜೊತೆಯಾಗಿ ನಿಲ್ಲಬೇಕಾಗಿದೆ ಎಂದರು.

ಮುಖ್ಯ ಶಿಕ್ಷಕರಾದ ಉಮೇಶ್ ಕೆ.ಆರ್.ರವರು ಇಂತಹ ವಿನೂತನವಾದ ಕಾರ್ಯಕ್ರಮಗಳು ನಡೆಯಲು ಸರ್ಕಾರದ ಇತ್ತೀಚಿನ ಆದೇಶವು ನಮಗೆಲ್ಲರಿಗೂ ತೊಡಕಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಕೈ ತಪ್ಪುವ ಸಾಧ್ಯತೆ ತುಂಬಾ ಇದೆ. ಆದ್ದರಿಂದ ಇಂತಹ ಕಾರ್ಯಕ್ರಮ ನಡೆಯಬೇಕಾದರೆ ಸ್ಥಳೀಯ ಗ್ರಾಮಸ್ಥರ ಹಾಗೂ ಸದಸ್ಯರ ಸಹಭಾಗಿತ್ವ, ಪೋಷಕರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದು ಈ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಐ ಎಫ್ ಎ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ರಾಧಿಕಾ ಭಾರದ್ವಾಜ್ ಮಾತನಾಡಿ, ಐಎಫ್ಎ ಸಂಸ್ಥೆಯ ಕಾರ್ಯಕ್ರಮದ ವಿವರಣೆಗಳನ್ನು ನೀಡಿದರು. ಜೊತೆಗೆ ಪರಿಸರ ಸಂಬಂಧಿತ ಈ ಯೋಜನೆ ಈ ಶಾಲೆಯಲ್ಲಿ ಒಂದು ವರ್ಷ ನಡೆಯಲಿದ್ದು, ಕಾರ್ಯಕ್ರಮವನ್ನು ಶಾಲೆ ಹಾಗೂ ಊರಿನ ಗ್ರಾಮಸ್ಥರು ಸದುಪಯೋಗಪಡಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಡಿಹಳ್ಳಿ ಸ್ವಾಮಿ ಹಾಗೂ ಗ್ರಾಮಸ್ಥರಾದ ಕೃಷ್ಣೇಗೌಡರು , ಶಾಲಾ ಸಹಶಿಕ್ಷಕರು ಹಾಜರಿದ್ದರು.