ಶಂಕರ್ ನಾಗ್ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ

| Published : Nov 13 2025, 12:30 AM IST

ಸಾರಾಂಶ

ಶಂಕರ್ ನಾಗ್ ಆಟೋ ಚಾಲಕರ ಸಂಘದಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಪರಂಪರೆಯನ್ನು ಹೊಂದಿದ ನೆಲ. ಕನ್ನಡ ನಾಡು ನುಡಿ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಕರಲಕಟ್ಟೆ ಗ್ರಾಮದ ವೃತ್ತದಲ್ಲಿ ಶಂಕರ್ ನಾಗ್ ಆಟೋ ಚಾಲಕರ ಸಂಘದಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕೃಷ್ಣೇಗೌಡನದೊಡ್ಡಿ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದಿಂದ ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ತಾಯಿ ಮೆರವಣಿಗೆ ಮಾಡಲಾಯಿತು.

ಶಾಲಾ ವಿದ್ಯಾರ್ಥಿಗಳ ಕುಂಭಮೇಳದೊಡನೆ ಮೆರವಣಿಗೆ ಮುಖಾಂತರ ಆಟೋ ನಿಲ್ದಾಣಕ್ಕೆ ಬಂದು ನಂತರ ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷ ಚಿಕ್ಕರಾಜು ಧ್ವಜಾರೋಹಣ ನೆರವೇರಿಸಿದ ನಂತರ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿ ಆಚರಣೆ ಮಾಡಲಾಯಿತು.

ನವ ಕರವೇ ತಾಲೂಕು ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಸಂಘದಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಪರಂಪರೆಯನ್ನು ಹೊಂದಿದ ನೆಲ. ಕನ್ನಡ ನಾಡು ನುಡಿ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಿದೆ ಎಂದರು.

ನಾಡು, ನುಡಿ, ನೆಲ, ಜಲ ವಿಷಯಕ್ಕೆ ಬಂದರೆ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಬೇಕು. ಕನ್ನಡ ಭಾಷೆ ಉಳಿವಿಗಾಗಿ ಶಂಕರ್ ನಾಗ್, ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಡಾ.ಅಂಬರೀಶ್, ಸಿ.ಅಶ್ವಥ್ ಮುಂತಾದವರ ಕೊಡುಗೆ ಅಪಾರವಾಗಿದೆ ಎಂದರು. ಗೊಲ್ಲರಹಳ್ಳಿ ಯುವ ಮುಖಂಡ ಜಿ.ಕೆ.ನಾಗೇಶ್ ಮಾತನಾಡಿದರು.

ನ.15 ರಂದು ಕನ್ನಡ ಜಾಗೃತಿ ಸಮಾವೇಶ: ಎಚ್.ಸಿ.ಮಂಜುನಾಥ್

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ನ.15ರಂದು ನಗರದ ಗಾಂಧಿ ಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ ಹಾಗೂ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಉದ್ಘಾಟಿಸುವರು. ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಶಾಸಕ ಪಿ.ರವಿಕುಮಾರ್ ಅವರು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಹಾಗೂ ಚಿತ್ರನಟ ಟೆನ್ನಿಸ್ ಕೃಷ್ಣ ಮೆರವಣಿಗೆಗೆ ಚಾಲನೆ ನೀಡುವರು. ಎಚ್.ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಇದೇ ವೇಳೆ ಪಿಡಬ್ಲ್ಯೂಡಿ ಇಇ ರಾಜಣ್ಣ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಎಸ್.ಜಿ. ಪ್ರಮೋದ್‌ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಮಾಜ ಸೇವಕ ಮುನಾವರ್ ಪಾಷ, ಅಂತಾರಾಷ್ಟ್ರೀಯ ಕ್ರೀಡಾಪಟು ಮಾನ್ಯ ಜಿ.ಎಸ್., ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ, ಮೇಲುಕೋಟೆ ಅರ್ಚಕ ಬಿ.ವಿ. ಆನಂದ್ ಆಳ್ವಾರ್, ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದ ಎಚ್.ಆರ್. ಕನ್ನಿಕ ಇತರರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ನಾಗೇಶ್, ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ಕನ್ನಡ ಸೇನೆ ಕಾರ್‍ಯಾಧ್ಯಕ್ಷ ಮುನಿಕೃಷ್ಣ, ರಾಜ್ಯ ಉಪಾಧ್ಯಕ್ಷ ಮುನಿರಾಜುಗೌಡ, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ. ಶೇಖರ್ ಇತರರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸೌಭಾಗ್ಯ ಶಿವಲಿಂಗು, ಮಹಂತಪ್ಪ, ಕಮ್ಮನಾಯಕನಹಳ್ಳಿ ಮಂಜು, ಬೆಟ್ಟಹಳ್ಳಿ ಮಂಜುನಾಥ್, ಉಬೇದ್ ಉಲ್ಲಾ, ತೇಜಸ್ ಇದ್ದರು.