ಸರ್ಕಾರಿ ಶಾಲೆಗಳ ಬಲವರ್ಧನೆಗೆ ಜಾಗೃತಿ ಕಾರ್ಯಕ್ರಮ

| Published : May 15 2025, 01:39 AM IST

ಸಾರಾಂಶ

ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ

ದಾಂಡೇಲಿ; ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಸರ್ಕಾರದ ಜೊತೆಗೆ ದಾನಿಗಳು ಕೈಜೋಡಿಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಹೆಳಿದರು.

ಅವರು ಮಂಗಳವಾರ ದಾಂಡೇಲಿ ತಾಲೂಕಿನ ಕೋಗಿಲಬನದ ಪಿಎಂಶ್ರೀ ಶಾಲೆಯಲ್ಲಿ ನಡೆದ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪಾಲಕರು ತಮ್ಮ ಮಕ್ಕಳನ್ನು ಅತ್ಯಂತ ಅಭಿಮಾನದಿಂದ ಸರ್ಕಾರಿ ಶಾಲೆಗೆ ಕಳುಹಿಸಬೇಕು. ಊರಿನ ಪ್ರಗತಿಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಜನಪರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರಕಾರದ ಜೊತೆಗೆ ಸಮುದಾಯದ ಸಹಭಾಗಿತ್ವ ಅತ್ಯಂತ ಮುಖ್ಯವಾಗಿ ಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಕೋಗಿಲಬನ ಗ್ರಾಪಂ ಅಧ್ಯಕ್ಷೆ ಪಾರರ್ವತಿ ಹರಿಜನ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಶೈಲೇಶ ಪರಮಾನಂದ ಮಾತನಾಡಿ, ತಾಲೂಕಿನ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಮಳೆಗಾಲದ ಕಾಲದಲ್ಲಿ ಆತಂಕಕಾರಿ ಮರಗಳಿಂದ ಅನಾಹುತ ಆಗುವ ಸಾಧ್ಯತೆ ಇದ್ದಲ್ಲಿ ಮೊದಲೇ ಗ್ರಾಪಂ ಅಥವಾ ತಾಲೂಕಾಡಳಿತದ ಗಮನಕ್ಕೆ ತರಬೇಕು ಎಂದು ಹೆಳಿದರು.

ಸಾರ್ವನಿಕರು ವಿಶೇಷವಾಗಿ ಮುತುವರ್ಜಿ ವಹಿಸಿದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ ಎಂದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕೋಗಿಲಬನ ಗ್ರಾಪಂ ಸದಸ್ಯ ರಮೇಶ ನಾಯ್ಕ, ನಗರಸಭೆ ಸದಸ್ಯ ಸರಸ್ವತಿ ರಜಪೂತ ಮಾತನಾಡಿದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ, ನಗರಸಭೆ ಸದಸ್ಯೆ ಯಾಸ್ಮೀನ ಕುತ್ತೂರ, ಮಾಜಿ ಗ್ರಾಪಂ ಅಧ್ಯಕ್ಷ ಅಶೋಕ ನಾಯ್ಕ, ಉಪಾಧ್ಯಕ್ಷೆ ಮಂಜುಳಾ ರಜಪೂತ, ಕ್ಷೇತ್ರ ಸಮನ್ವಯಾಧಿಕಾರಿ ಮಹಾದೇವಿ ಚೌಗಲೆ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ರೆಹಮತ ಇಲಾಹಿ ಜುಂಜವಾಡಕರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಶ ನಾಯ್ಕ ಇದ್ದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಯ ಅಬ್ದುಲ್‌ ರೆಹಮಾನ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಯನಿ ಶಶಿಕಲಾ ವಂದಿಸಿದರು. ಸಿಆರ್‌ಪಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.