ಸಾರಾಂಶ
ಆಯುರ್ವೇದದಲ್ಲಿ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆ ಇದೆ. ಇದರಲ್ಲಿ ಸುಮಾರು 195 ಬಗೆಯ ಶಸ್ತ್ರಚಿಕಿತ್ಸೆಯ ಉಲ್ಲೇಖ ಇದೆ. ಈ ನಿಟ್ಟಿನಲ್ಲಿ ಆಯುರ್ವೇದದ ತಳಸ್ಪರ್ಶಿ ಅಧ್ಯಯನ ನಡೆಯಬೇಕಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ವೈಯಕ್ತಿಕ ಆರೋಗ್ಯದ ಜೊತೆಗೆ ಸಮಾಜ ಮತ್ತು ದೇಶದ ಸ್ವಾಸ್ಥ್ಯದ ರಕ್ಷಣೆ ಎಲ್ಲ ವಿಜ್ಞಾನಗಳ ಆಶಯ. ಆಯುರ್ವೇದದಲ್ಲಿ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆ ಇದೆ. ಇದರಲ್ಲಿ ಸುಮಾರು 195 ಬಗೆಯ ಶಸ್ತ್ರಚಿಕಿತ್ಸೆಯ ಉಲ್ಲೇಖ ಇದೆ. ಈ ನಿಟ್ಟಿನಲ್ಲಿ ಆಯುರ್ವೇದದ ತಳಸ್ಪರ್ಶಿ ಅಧ್ಯಯನದ ಜೊತೆಗೆ ಆಧುನಿಕತೆಯ ಜ್ಞಾನವನ್ನು ಪಡೆದುಕೊಂಡರೆ ವೃತ್ತಿಯಲ್ಲಿ ಸಾಧನೆ ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕರೆ ನೀಡಿದರು.ಅವರು ಶುಕ್ರವಾರ ಮಣಿಪಾಲದ ಮುನಿಯಾಲು ಆಯುರ್ವೇದ ಆರೋಗ್ಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.ಆಯುರ್ವೇದದಲ್ಲಿ ಇಷ್ಟೆಲ್ಲ ಇದ್ದಾಗ್ಯೂ ಚಿಕಿತ್ಸಾ ಕ್ರಮ, ಔಷಧ ತಯಾರಿ ಇತ್ಯಾದಿಗಳನ್ನು ರಹಸ್ಯವಾಗಿಟ್ಟಿರುವುದು, ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಆಧುನಿಕತೆಯಲ್ಲಿ ಒಗ್ಗದಿರುವುದು ಜೊತೆಗೆ ದಾಖಲೀಕರಣ ಇಲ್ಲದಿರುವುದು ಆಯುರ್ವೇದದ ಜನಪ್ರಿಯತೆಗೆ ಹಿನ್ನಡೆಯಾಗಿದೆ ಎಂದವರು ಅಭಿಪ್ರಾಯಪಟ್ಟರು.ಆಯುರ್ವೇದ ಭಾರತೀಯ ಮೂಲ ವೈದ್ಯ ಪದ್ಧತಿಯಾಗಿದ್ದು, ಅದು ಪರ್ಯಾಯ ಚಿಕಿತ್ಸಾ ಕ್ರಮ ಅಲ್ಲ. ಅಲೋಪಥಿ ಮತ್ತಿತರ ಚಿಕಿತ್ಸಾ ಪದ್ಧತಿಗಳು ಪರ್ಯಾಯ ವೈದ್ಯ ಪದ್ಧತಿಗಳಾಗಿವೆ. ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಆಧುನಿಕತೆ ಮೈಗೂಡಿಸಿಕೊಳ್ಳದ ಪರಿಣಾಮ ಆಯುರ್ವೇದ ಸೊರಗಿದೆ ಎಂದು ಅವರು ವಿಷಾದಿಸಿದರು.ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿಜಯಭಾನು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಸತ್ಯನಾರಾಯಣ ಭಟ್ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ದೇಶಕಿ ಡಾ. ಶ್ರದ್ಧಾ ಶೆಟ್ಟಿ ಪ್ರಸ್ತಾವನೆಗೈದರು. ಡಾ. ಗುರುರಾಜ್ ಸ್ವಾಗತಿಸಿ, ಹರಿಪ್ರಸಾದ ಭಟ್ ವಂದಿಸಿದರು. ಡಾ. ಪ್ರೀತಿ ಪಾಟೀಲ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಡಾ. ಶುಭಾ ಎಂ. ಸಹಕರಿಸಿದರು.