ಸಾರಾಂಶ
ಮನಸ್ಸು ಸರಿಯಾದ ರೀತಿಯಲ್ಲಿ ಅರಳಲು ಕಲಾ ಪ್ರಕಾರಗಳ ಕಲಿಕೆ ಮಹತ್ವವಾದುದು
ಕನ್ನಡಪ್ರಭ ವಾರ್ತೆ ಮೈಸೂರುನಗರದ ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ನಿಂದ ಭಾರತೀಯ ಪ್ರದರ್ಶಕ ಕಲೆಗಳಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಚಂಪಕ ರಾಷ್ಟ್ರೀಯ ಕಲಾ ಉತ್ಸವವು ರಾಮಕೃಷ್ಣನಗರದ ಚಂಪಕ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು.
ಅಕಾಡೆಮಿಯ ಸಂಸ್ಥಾಪಕಿ ನಾಗಲಕ್ಷ್ಮಿ ನಾಗರಾಜನ್ ಅವರ ಭರತನಾಟ್ಯ ಪ್ರದರ್ಶನದೊಂದಿಗೆ ಕಲಾ ಉತ್ಸವ ಆರಂಭವಾಯಿತು. ಸುಕನ್ಯಾ ಪ್ರಭಾಕರ್ ಅವರ ಸ್ತ್ರೀ ಹರಿದಾಸಿಯರ ಕೃತಿಯನ್ನು ಆಧರಿಸಿತ್ತು. ಹರಿದಾಸಿ ನಿಡಗುರಕಿ ಜೀವೋಬಾಯಿ ಅವರ ಸಂಯೋಜನೆಗಳಿಗೆ ನೃತ್ಯವನ್ನು ಆರಂಭಿಸಿದರು. ಮೊದಲನೆಯದರಲ್ಲಿ ಎಲ್ಲ ಅಡೆತಡೆಗಳ ವಿನಾಶಕ ಗಣಪತಿಯನ್ನು ಆವಾಹನೆ ಮಾಡಿ ನಂತರ ಗೋಕುಲದಲ್ಲಿ ಯುವ ಕೃಷ್ಣ ಮತ್ತು ಅವನ ಅವತಾರದ ಹಂತಗಳನ್ನು ಚಿತ್ರಿಸುವ ಶ್ರೀ ಕೃಷ್ಣ ಸ್ತುತಿ ಪ್ರಸ್ತುತಿಗೊಳಿಸಿದರು. ಬೆಂಗಳೂರಿನ ಕಲ್ಪನಾ ಸ್ಕೂಲ್ ಆಫ್ ಡ್ಯಾನ್ಸ್ನ ಸಂಸ್ಥಾಪಕ ನಿರ್ದೇಶಕಿ ಭಾರತಿ ವಿಟ್ಟಲ್ ಮತ್ತು ಶಿಷ್ಯರು ಕಥಕ್ ಪ್ರದರ್ಶನ ಪ್ರಸ್ತುತಿಗೊಳಿಸಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಮನಸ್ಸು ಸರಿಯಾದ ರೀತಿಯಲ್ಲಿ ಅರಳಲು ಕಲಾ ಪ್ರಕಾರಗಳ ಕಲಿಕೆ ಮಹತ್ವವಾದುದು. ಭಾರತೀಯ ಸಾಂಪ್ರದಾಯಿಕ ಕಲೆಗಳು ಪ್ರೇಕ್ಷಕರ ಮನಸ್ಸನ್ನು ರಂಜಿಸುವುದು ಮಾತ್ರವಲ್ಲದೆ, ಪ್ರಚೋದಿಸುವ ಆಧುನಿಕ ರೂಪಗಳಿಗಿಂತ ಭಿನ್ನವಾಗಿದ್ದು, ಶಾಸ್ತ್ರೀಯ ನೃತ್ಯವು ದೇಹ, ಮನಸ್ಸು ಮತ್ತು ಆತ್ಮವನ್ನು ವಿಕಸಿತಗೊಳಿಸುವ ಒಂದು ಕಲಾ ಪ್ರಕಾರವಾಗಿದೆ ಎಂದರು.