ಸಾರಾಂಶ
ಬ್ಯಾಡಗಿ: ಕೆಂಪು ಸುಂದರಿ ಮೆಣಸಿನಕಾಯಿ ಖ್ಯಾತಿಯ ಬ್ಯಾಡಗಿ ಪಟ್ಟಣದಲ್ಲಿ ಜ. 24ರಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಆಸಕ್ತರಿಗೆ ಕನ್ನಡದ ಸವಿ ಉಣಬಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.ಸಾಹಿತ್ಯ ಸಮ್ಮೇಳನ ನಿಮಿತ್ತ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸಂತಶ್ರೇಷ್ಠ ಕನಕದಾಸರ ವೇದಿಕೆ, ಸಾಹಿತಿ ಮಹದೇವ ಬಣಕಾರ ಮಹಾದ್ವಾರ, ಹುತಾತ್ಮ ಮಹಾದೇವ ಮೈಲಾರ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಈ ಮೂಲಕ ತಾಲೂಕಿನ ಎಲ್ಲ ಮಹನೀಯರಿಗೆ ಗೌರವ ಸಲ್ಲಿಸಿದಂತಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ:ಜ. 24ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರ, ಪರಿಷತ್, ಹಾಗೂ ನಾಡಧ್ವಜಾರೋಹಣವನ್ನು ತಹಸೀಲ್ದಾರ್ ಸೋಮನಕಟ್ಟಿ, ಕಸಾಪ ಅಧ್ಯಕ್ಷ ಬಿ.ಎಂ. ಜಗಾಪುರ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ನೆರವೇರಿಸಲಿದ್ದಾರೆ. ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಸಮ್ಮೇಳಾನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಮ್ಮೇಳನ ಉದ್ಘಾಟನೆ: ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ 7ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಜಾನಪದ ವಿದ್ವಾಂಸ ಶಂಭು ಬಳಿಗಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಬಸವರಾಜ ಶಿವಣ್ಣನವರ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಮನ್ನಂಗಿ, ಕಸಪಾ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹಾಗೂ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಪಂಚ ಗ್ಯಾರಂಟಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಒಟ್ಟು 4 ಗೋಷ್ಠಿಗಳು: ಸಮ್ಮೇಳನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಂಕೀರ್ಣ ಗೋಷ್ಠಿ, 1 ಗಂಟೆಗೆ ನಮ್ಮ ಭೂಮಿ ನಮ್ಮ ಹೆಮ್ಮೆ ಗೋಷ್ಠಿ, ಮಧ್ಯಾಹ್ನ 2 ಗಂಟೆಗೆ ಸಂಕೀರ್ಣ ಗೋಷ್ಠಿ ಹಾಗೂ ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ಸೇರಿದಂತೆ ಒಟ್ಟು ನಾಲ್ಕು ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ.
ಸಮಾರೋಪ ಸಮಾರಂಭ: ಸಂಜೆ 5ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿದಂತೆ ಅಂದು 5.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು. ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಚೆನ್ನಮ್ಮ ಕೋರಿಶೆಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿದಂತೆ ಸಂಜೆ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಲ್ಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.ಸಮ್ಮೇಳನದ ಸರ್ವಾಧ್ಯಕ್ಷ: 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕ, ಸಾಹಿತಿ, ಪಟ್ಟಣದ ವಿದ್ಯಾನಗರದ ನಿವಾಸಿ ಜೀವರಾಜ ಛತ್ರದ ಅವರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ತೇರನ್ನು ಎಳೆಯಲು ಸಾಹಿತ್ಯಪ್ರೇಮಿಗಳು ಸಜ್ಜಾಗಿದ್ದಾರೆ.ಎಲ್ಲೆಲ್ಲೂ ಕನ್ನಡ ಬಾವುಟ: ಎರಡು ವರ್ಷಗಳ ಆನಂತರ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಅದ್ಧೂರಿಯಾಗಿ ನಡೆಸಬೇಕು ಎನ್ನುವ ಉದ್ದೇಶದಿಂದ ಪಟ್ಟಣದ ತುಂಬೆಲ್ಲ ಕೆಂಪು ಹಳದಿ ಬಣ್ಣದ ಕನ್ನಡದ ಬಾವುಟಗಳು ರಾರಾಜಿ ಸುತ್ತಿವೆ. ಕನ್ನಡಪ್ರೇಮಿಗಳು ಸ್ವಯಂಪ್ರೇರಿತರಾಗಿ ಪಟ್ಟಣವನ್ನು ಸಿಂಗಾರಗೊಳಿಸುತ್ತಿದ್ದಾರೆ.