ಹಬ್ಬದ ಅಂಗವಾಗಿ ಬೆಳಗ್ಗೆ ಹೊಸ ಬಟ್ಟೆ ತೊಟ್ಟ ಮುಸ್ಲಿಂ ಬಾಂಧವರು ನಂತರ ನಗರದ ಸಂತೆ ಮೈದಾನದ ಮಸೀದಿಯ ಮುಂಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಹಬ್ಬದಂದು ಸಾವಿರಾರು ಮಂದಿ ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾದ್ಯಂತ ಮುಸ್ಲಿಮರು ಶ್ರದ್ಧಾ- ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಗುರುವಾರ ಆಚರಣೆ ಮಾಡಿದರು.ಮಂಡ್ಯ ನಗರ, ಗ್ರಾಮಾಂತರ ಹಾಗೂ ಜಿಲ್ಲೆಯ ಕೆ.ಆರ್.ಪೇಟೆ, ಮದ್ದೂರು, ಪಾಂಡವಪುರ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಮುಸ್ಲಿಮರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಬೆಳಗ್ಗೆ ಹೊಸ ಬಟ್ಟೆ ತೊಟ್ಟ ಮುಸ್ಲಿಂ ಬಾಂಧವರು ನಂತರ ನಗರದ ಸಂತೆ ಮೈದಾನದ ಮಸೀದಿಯ ಮುಂಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಹಬ್ಬದಂದು ಸಾವಿರಾರು ಮಂದಿ ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಇದೇ ವೇಳೆ ಧರ್ಮ ಗುರುಗಳು ಧರ್ಮಗ್ರಂಥ ಕುರಾನ್ ಪಠಣೆ ಮಾಡಿ ಅಲ್ಲಾನ ಸಂದೇಶದಂತೆ ಪ್ರತಿಯೊಬ್ಬರೂ ಸೌಹಾರ್ದತೆಗೆ ಮುಂದಾಗಬೇಕು. ಮಾನವ ಜನ್ಮ ಪವಿತ್ರವಾದದ್ದು. ಶಾಂತಿ- ನೆಮ್ಮದಿಯಿಂದ ಬದುಕು ನಡೆಸಬೇಕು ಎಂದು ಸಾರಿದರು.
ಬಕ್ರೀದ್ ಹಬ್ಬ ತ್ಯಾಗ, ಪ್ರೀತಿ, ಭ್ರಾತೃತ್ವ, ಬಲಿದಾನದ ಸಂಕೇತ. ಈ ಹಬ್ಬದಂದು ಬಡವರಿಗೆ ಕೈಲಾದಷ್ಟು ಸಹಾಯ ಮಾಡುವಂತೆ ತಿಳಿಸಿದರು. ಪುಟ್ಟ ಮಕ್ಕಳು ಸೇರಿ ಎಲ್ಲರೂ ಶುಭಾಶಯ ಕೋರುತ್ತಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.ಮಂಡ್ಯ ನಗರದ ಮಸೀದಿಗಳು ಸೇರಿದಂತೆ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳ ಮಸೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ಕೋರಿ ಆಚರಣೆ ಮಾಡಿದರು.