ಬಮೂಲ್ ಅಕ್ರಮಗಳಿಗೆ ಕಡಿವಾಣ: ಮುನಿರಾಜು

| Published : Sep 21 2025, 02:00 AM IST

ಸಾರಾಂಶ

ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಒಕ್ಕೂಟದ ನಿರ್ದೇಶಕ ಎಸ್. ಪಿ. ಮುನಿರಾಜು, ಈ ಹಿಂದೆ ಆಗುತ್ತಿದ್ದ ಅಕ್ರಮಕ್ಕೆ ಕೊನೆ ಹಾಡಲಾಗಿದ್ದು, ಇದರೊಂದಿಗೆ ರೈತರಿಗೆ ಯಾವುದೇ ಸಮಸ್ಯೆ ಇದ್ದರೂ ಸಹ ಒಕ್ಕೂಟದಿಂದ ಟೋಲ್ ಫ್ರೀ ನಂಬರ್‌ಅನ್ನು ಪ್ರತಿ ಡೈರಿ ನೋಟಿಸ್ ಬೋರ್ಡ್ ನಲ್ಲಿಯೂ ಹಾಕಲಾಗಿದ್ದು, ಸಂಪರ್ಕಿಸಿ ರೈತರು ತಮ್ಮ ಅಹವಾಲು ತಿಳಿಸಬಹುದೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ನಾಲ್ಕು ತಿಂಗಳ ಹಿಂದೆ ಪ್ರತಿ ತಿಂಗಳು ನಷ್ಟ ಅನುಭವಿಸುತ್ತಿದ್ದ ಬೆಂಗಳೂರು ಹಾಲು ಒಕ್ಕೂಟದ ಆಡಳಿತವನ್ನು ಬಿಗಿಗೊಳಿಸಿ, ನಷ್ಟ ಕಡಿಮೆ ಮಾಡುವುದರೊಂದಿಗೆ ಹಾಲಿ ಯಾವುದೇ ನಷ್ಟ ಇಲ್ಲದಂತಹ ಪರಿಸ್ಥಿತಿಗೆ ಒಕ್ಕೂಟವನ್ನು ತರಲಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್. ಪಿ. ಮುನಿರಾಜು ತಿಳಿಸಿದರು.

ಅವರು ಇಲ್ಲಿನ ಸುಬ್ಬಮ್ಮ- ಚೆನ್ನಪ್ಪ ಸಮುದಾಯ ಭವನದಲ್ಲಿ ವಿಜಯಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ವತಿಯಿಂದ ಏರ್ಪಡಿಸಲಾಗಿದ್ದ ೨೦೨೪- ೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಒಕ್ಕೂಟದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಲ್ಲದೇ, ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದರ ಮೂಲಕ ನಷ್ಟ ಕಡಿಮೆ ಮಾಡಿ ಒಕ್ಕೂಟವನ್ನು ಆದಾಯದ ಕಡೆಗೆ ಅಧ್ಯಕ್ಷ ಡಿ.ಕೆ. ಸುರೇಶ್ ಕೊಂಡೊಯ್ಯುತ್ತಿದ್ದಾರೆಂದು ತಿಳಿಸಿದರು.

ವಿಜಯಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎನ್. ಮನೋಹರ್ ಮಾತನಾಡುತ್ತಾ, ತಾಲೂಕಿನಲ್ಲಿಯೇ ಅತಿ ಹೆಚ್ಚು ಹಾಲನ್ನು ಪಟ್ಟಣದ ಡೈರಿ ಉತ್ಪಾದಿಸುತ್ತಿದ್ದು, ಪ್ರತಿ ಲೀಟರ್ ಹಾಲಿಗೆ ೫೫ರಷ್ಟು ಲಾಭಾಂಶ ನೀಡುತ್ತಿದ್ದು, ಇದರೊಂದಿಗೆ ರೈತರಿಗೆ ಪ್ರತಿ ಲೀಟರ್‌ಗೆ ಎರಡು ರು. ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ದೇವನಹಳ್ಳಿ ಶಿಬಿರದ ವಿಸ್ತರಣಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ರೈತರು ಹಸುಗಳಿಗೆ ಮುಸುರೆ ನೀರು, ಉಪ್ಪು ಮೊದಲಾದವುಗಳನ್ನು ನೀಡಬಾರದೆಂದು, ಗಟ್ಟಿಮೇವು ನೀಡುವ ಮೂಲಕ ಗುಣಮಟ್ಟದ ಹಾಲನ್ನು ನೀಡಿ ಡೈರಿಯಿಂದ ನೀಡಲಾಗುತ್ತಿರುವ ಹೆಚ್ಚುವರಿ ಹಣ ಪಡೆದುಕೊಳ್ಳಬಹುದು, ಈ ಬಾರಿ ಹಸುಗಳಿಗೆ ವಿಮೆಯನ್ನು ಏಪ್ರಿಲ್ ತನಕ ಮಾಡಿಸಲಾಗಿದ್ದು, ಇದರ ಮಧ್ಯೆ ಬೇರೆಡೆಯಿಂದ ಹಸುಗಳನ್ನು ಕೊಂಡು ತರುವವರು ಅಲ್ಲಿಂದ ವಿಮೆಯ ಮಾಹಿತಿ ಪಡೆದುಕೊಂಡು ತಮ್ಮ ಹೆಸರಿಗೆ ಬದಲಾವಣೆ ಸಹ ಮಾಡಿಸಿಕೊಳ್ಳಬಹುದು ಎಂದು ಹಸುಗಳಿಗೆ ಒಂದು ಲಕ್ಷ ರು.ಗಳವರೆಗೆ ವಿಮೆ ಮಾಡಲಾಗುತ್ತಿದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ರೈತ ಕೃಷ್ಣಪ್ಪ ಮಾತನಾಡಿ, ಈ ಹಿಂದೆ ಡೈರಿ ಮೂಲಕ ಮೇವು ಕಟಿಂಗ್ ಮಷಿನ್ ನೀಡಲಾಗುತ್ತಿದ್ದು, ಇದೀಗ ಅದನ್ನು ಕೃಷಿ ಇಲಾಖೆ, ರೇಷ್ಮೆ ಇಲಾಖೆಯಲ್ಲಿ ಪಡೆದುಕೊಳ್ಳಿ ಎಂದು ಹೇಳುತ್ತಿದ್ದು, ಅಲ್ಲಿ ಹೋದಾಗ ಪಹಣಿ ಮತ್ತಿತರೆ ದಾಖಲೆಗಳನ್ನು ಕೇಳುತ್ತಾ ತಿಂಗಳುಗಟ್ಟಲೆ ರೈತರನ್ನು ಆಲಿಸುತ್ತಿರುವರೆಂದು ಬೇಸರ ವ್ಯಕ್ತಪಡಿಸಿದರು.

ರೈತ ನಾಗರಾಜುರವರು ಮಾತನಾಡಿ, ಹಸುಗಳನ್ನು ನೋಡಲು ಬರುವ ವೈದ್ಯರು ರೈತರಿಂದ ಹಣ ಸುಲಿಗೆ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಒಕ್ಕೂಟದ ನಿರ್ದೇಶಕ ಎಸ್. ಪಿ. ಮುನಿರಾಜು, ಈ ಹಿಂದೆ ಆಗುತ್ತಿದ್ದ ಅಕ್ರಮಕ್ಕೆ ಕೊನೆ ಹಾಡಲಾಗಿದ್ದು, ಇದರೊಂದಿಗೆ ರೈತರಿಗೆ ಯಾವುದೇ ಸಮಸ್ಯೆ ಇದ್ದರೂ ಸಹ ಒಕ್ಕೂಟದಿಂದ ಟೋಲ್ ಫ್ರೀ ನಂಬರ್‌ಅನ್ನು ಪ್ರತಿ ಡೈರಿ ನೋಟಿಸ್ ಬೋರ್ಡ್ ನಲ್ಲಿಯೂ ಹಾಕಲಾಗಿದ್ದು, ಸಂಪರ್ಕಿಸಿ ರೈತರು ತಮ್ಮ ಅಹವಾಲು ತಿಳಿಸಬಹುದೆಂದು ಹೇಳಿದರು.

ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ೪೦ ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ನಾರಾಯಣಸ್ವಾಮಿಯವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಿನ್ನಪ್ಪ, ಕೆ. ವಿ. ಮುನಿರಾಜು, ಎಂ. ಕೆ. ಅನಿಲ್ ಕುಮಾರ್, ಕೆ. ವೆಂಕಟೇಶ್, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎನ್. ಲಕ್ಷ್ಮೀನಾಗರಾಜ್, ವಿ. ರವಿ, ಕೆ. ನಾಗರಾಜು, ಆರ್. ನಾಗರಾಜು, ಎ. ವೇಣುಗೋಪಾಲ್, ಸುಹಾಸ್, ಮುನಿಶಾಮಪ್ಪ, ವಿ. ಮಂಜಣ್ಣ, ಗೌರಮ್ಮ, ಎಂ. ಮುರಳಿ, ಮುಖ್ಯ ಕಾರ್ಯನಿರ್ವಾಹಕ ಎನ್. ಮಂಜುನಾಥ್, ಹಾಲು ಪರೀಕ್ಷಕರಾದ ಎನ್. ಚಂದ್ರಶೇಖರ್, ಎಸ್. ಗಿರೀಶ್, ಪಿ. ರಾಜೇಶ್, ಎಂ. ಚಂದ್ರುರವರು ಉಪಸ್ಥಿತರಿದ್ದರು.