ಹಳ್ಳಿಯಿಂದ ದೊಡ್ಡ ನಗರದವರೆಗೂ ವ್ಯಾಪಿಸಿದೆ ಮಾದಕ ವಸ್ತುಗಳ ಕಬಂದ ಬಾಹು: ನಿರಂಜನಗೌಡ

| Published : Sep 21 2025, 02:00 AM IST

ಸಾರಾಂಶ

ನರಸಿಂಹರಾಜಪುರ, ಇಂದು ಮಾದಕ ವಸ್ತುಗಳ ಕದಂಬ ಬಾಹುಗಳು ಹಳ್ಳಿಯಿಂದ ದೊಡ್ಡ ನಗರದವರೆಗೆ ವ್ಯಾಪಿಸಿದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.

- ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇಂದು ಮಾದಕ ವಸ್ತುಗಳ ಕದಂಬ ಬಾಹುಗಳು ಹಳ್ಳಿಯಿಂದ ದೊಡ್ಡ ನಗರದವರೆಗೆ ವ್ಯಾಪಿಸಿದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.

ಶನಿವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳು ಹಾಗೂ ನಗರ ವ್ಯಾಪ್ತಿಯ ಒಕ್ಕೂಟದ ಸದಸ್ಯರಿಗೆ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಯುವ ಜನರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೆಚ್ಚಾಗಿ ಯುವ ಜನರೇ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವುದು ಕಳವಳಕಾರಿ ಯಾಗಿದೆ. ಯುವಕ, ಯುವತಿಯರು ಪ್ರಾರಂಭದಲ್ಲಿ ಮೋಜಿಗಾಗಿ ಸೇವನೆ ಮಾಡುವ ಮಾದಕ ವಸ್ತುಗಳು ನಂತರ ಚಟವಾಗಿ ಬದಲಾಗುತ್ತದೆ. ಒಂಟಿಯಾಗಿರುವ ಯುವಕರು, ಹಾಸ್ಟೆಲ್, ಪಿಜಿಗಳಲ್ಲಿ ಇರುವುವರು, ಕೂಲಿ ಕಾರ್ಮಿಕರ ಮಕ್ಕಳು ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ. ಕ್ರೀಡಾ ಪಟುಗಳು ಸಹ ಉತ್ತೇಜನಕ್ಕೆ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಾರೆ. 1985ರಲ್ಲಿ ಮಾದಕ ವಸ್ತುಗಳ ನಿರ್ಬಂಧಿಸುವ ಕಾನೂನು ಬಂದಿದೆ. ಮಾದಕ ವಸ್ತುಗಳ ಮಾರಾಟ ಮಾಡುವುವರಿಗೆ ಕಠಿಣ ಶಿಕ್ಷೆಯಾಗಲಿದೆ. ಮಾದಕ ವಸ್ತುಗಳ ಸೇವನೆ ಮಾಡುವವರನ್ನು ಗುರುತಿಸಿ ಅವರಿಗೆ ಕೌನ್ಸಿಲಿಂಗ್ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ತಂದೆ,ತಾಯಿಯರು ತಮ್ಮ ಮಕ್ಕಳ ಚಲನವಲನ ಗಮನಿಸುತ್ತಿರಬೇಕು ಎಂದು ಸೂಚಿಸಿದರು.

ಸಾಹಿತಿ ಭಾಗ್ಯ ನಂಜುಂಡಸ್ವಾಮಿ ಉಪನ್ಯಾಸ ನೀಡಿ, ಮಾದಕ ವಸ್ತುಗಳ ಚಟಕ್ಕೆ ಬಿದ್ದ ಮಕ್ಕಳು ಮಾದಕ ವಸ್ತುಗಳಿಗಾಗಿ ಕಳ್ಳತನ ಸಹ ಮಾಡುತ್ತಾರೆ. ಮನೆ ಹಿರಿಯರು ಮಕ್ಕಳ ನಡವಳಿಕೆ ಗಮನಿಸುತ್ತಿರಬೇಕು. ದುಶ್ಚಟಕ್ಕೆ ಬಲಿಯಾದವರಿಗೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಅವರ ಆರೋಗ್ಯವೂ ಹಾಳಾಗುತ್ತದೆ.ಕುಟುಂಬದವರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಮಾದಕ ವಸ್ತುಗಳ ಚಟಕ್ಕೆಬಲಿಯಾದವರನ್ನು ಸಹನೂಭೂತಿಯಿಂದ ನಡೆಸಿಕೊಳ್ಳಬೇಕು.ಇದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಕೇವಲ ಸಂಪತ್ತುಗಳಿಸುವುದನ್ನು ಮಾತ್ರ ಕಲಿಸದೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ಕರೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಉದ್ಘಾಟಿಸಿ ಮಾತನಾಡಿ, ತಾತ್ಕಾಲಿಕ ಸಂತೋಷಕ್ಕಾಗಿ ಯುವ ಜನರು ಮಾದಕ ವಸ್ತುಗಳನ್ನು ಸೇವಿಸುತ್ತಾರೆ. ನಂತರ ಚಟವಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಕೆಲವು ವ್ಯಸನಿಗಳು ಆತ್ಮಹತ್ಯೆಗೂ ಮುಂದಾಗುತ್ತಾರೆ. ಅಪರಾಧಕ್ಕೂ ಮುಂದಾಗುತ್ತಾರೆ.ಇದರಿಂದ ಕುಟುಂಬದ ಸಾಮರಸ್ಯ ಹಾಳಾಗುತ್ತದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಮಕ್ಕಳನ್ನು ಪ್ರೀತಿ, ಶಿಸ್ತಿನಿಂದ ಬೆಳೆಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆ ನಾಗಲತಾ, ಸುಹಾಸ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸಮುದಾಯ ಸಂಘಟಕ ಲಕ್ಷ್ಮಣಗೌಡ, ಪ್ರಾದೇಶಿಕ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾನುಮತಿ,ಶಿಶು ಅಭಿವೃದ್ಧಿ ಇಲಾಖೆ ಮೇಲ್ವೀಚಾರಕಿ ಸಾವಿತ್ರಮ್ಮ, ಪಪಂ ಸಮುದಾಯ ಸಂಪನ್ಮೂಲ ವ್ಯಕ್ತಿ ಶೃತಿ ಮತ್ತಿತರರು ಇದ್ದರು.