ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಧರ್ಮದ ಕಾಲಂನಲ್ಲಿ ಭೌದ್ಧ ಎಂದು ನಮೂದಿಸಲು ಕರ್ನಾಟಕ ರಾಜ್ಯ ಕೇಂದ್ರ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ ಎಂದು ಸಂಘಟನೆಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶತಮಾನಗಳಿಂದ ಶೋಷಿತರಾದ ನಾವು ಶೋಷಣೆಗೊಳಪಟ್ಟು ಅಸ್ಪ್ರಶ್ಯತೆ, ಅವಮಾನ ಎದರಿಸುತ್ತಾ ಬಂದಿದ್ದೇವೆ. ಡಾ.ಅಂಬೇಡ್ಕರ್ ತತ್ವ, ಆದರ್ಶ ನಿಲುವುಗಳ ಬದ್ಧತೆ ಇರುವ ನಾವು ಬಾಬಾಸಾಹೇಬ್ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್ ಅವರು ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನರು ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದು ಇತಿಹಾಸ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಕೂಡ ದಲಿತರು ಇಂದು ಕೂಡ ದೇವಾಲಯ ಪ್ರವೇಶ ಮಾಡಲಾಗದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ನಾವೆಲ್ಲಾ ನಿಜವಾಗಿಯೂ ಅಂಬೇಡ್ಕರ್ ಅವರ ಅನುಯಾಯಿಗಳೇ ಆಗಿದ್ದರೆ ಈ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ, ಜಾತಿ ಕಾಲಂನಲ್ಲಿ ಹೊಲಯ, ಮಾದಿಗ ಎಂದು ನಮೂದಿಸಿ, ಅದರ ಪಕ್ಕದಲ್ಲಿ ಉಪ ಜಾತಿ ನಮೂದಿಸಿ ಎಂದರು.
ಇತ್ತೀಚಿನ ಧರ್ಮದ ಕಾಲಂ 8ರ ಕ್ರಮ ಸಂಖ್ಯೆ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮದ ಅವಕಾಶವನ್ನು ಆಯ್ಕೆ ಮಾಡಿಕೊಂಡು ಜಾತಿ ಕಾಲಂ ೯ ರಲ್ಲಿ ಪರಿಶಿಷ್ಟ ಜಾತಿ ಉಲ್ಲೇಖಿಸಿ, ಉಪಜಾತಿ ಕಾಲಂ 10ರಲ್ಲಿ ಮೂಲ ಜಾತಿಯನ್ನು ನಮೂದಿಸಬಹುದು ಎಂದು ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ಕಾಲಂ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೋಷಿತರಾದ ನಮ್ಮನ್ನು ಮೇಲೆತ್ತಲು ಈ ಅವಕಾಶ ನೀಡಿದ್ದು ಅದರಂತೆ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತವನ್ನು ಪಾಲನೆ ಮಾಡುತ್ತಿರುವ ನಾವು ಪೂರ್ಣ ಪ್ರಮಾಣದಲ್ಲಿ ನಾವು ಬೌದ್ಧರೆಂದು ಘೋಷಣೆ ಮಾಡಿಕೊಳ್ಳಬೇಕು ಎಂದರು.ಡಿಎಸ್‌ಎಸ್‌ಕೆ ತಾಲೂಕು ಸಂಚಾಲಕ ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಲೋಕೇಶ್, ವಿಭಾಗೀಯ ಸಂಚಾಲಕ ಐ.ಆರ್ ನಾರಾಯಣಸ್ವಾಮಿ, ಜಿಲ್ಲಾ ಸಂಘಟನಾ ಸಂಯೋಜಕ ಐ.ಆರ್.ನಾರಾಯಣಸ್ವಾಮಿ ಇವರು ಸ್ವ- ಹಿತಾಸಕ್ತಿಯಿಂದ ಜಿಲ್ಲೆಗಳ ಪ್ರತಿ ಗ್ರಾಮಗಳಿಗೆ ತೆರಳಿ ಸಮುದಾಯದ ಮನವೊಲಿಸಬೇಕು ಎಂದರು.