ಬೆಳೆ ಹಾನಿಗೆ ಫಸಲ್ ಭೀಮಾ ಯೋಜನೆ ವರದಾನ: ಶ್ರೀಸಾಯಿರೆಡ್ಡಿ

| Published : Sep 21 2025, 02:00 AM IST

ಬೆಳೆ ಹಾನಿಗೆ ಫಸಲ್ ಭೀಮಾ ಯೋಜನೆ ವರದಾನ: ಶ್ರೀಸಾಯಿರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ವಿಕೋಪದಿಂದ ದೇಶದ ಎಲ್ಲ ಭಾಗಗಳಲ್ಲಿಯೂ ವಿಪರೀತ ಮಳೆಯಾಗುತ್ತಿದೆ. ಇದರಿಂದ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲಿ ಪ್ರಕೃತಿ ವೈಪರಿತ್ಯದಿಂದಾಗಿ ರೈತರು ಕಂಗೆಟ್ಟಿದ್ದು, ಪ್ರಸ್ತುತ ಹಾನಿಗೊಳಗಾದ ಅವರ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸವಲತ್ತು ದೊರೆಯುವಂತೆ ಕ್ರಮವಹಿಸಲು ದೇಶಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ಅಧ್ಯಕ್ಷ ಶ್ರೀಸಾಯಿ ರೆಡ್ಡಿ ತಿಳಿಸಿದರು.

ಪ್ರಕೃತಿ ವಿಕೋಪದಿಂದ ದೇಶದ ಎಲ್ಲ ಭಾಗಗಳಲ್ಲಿಯೂ ವಿಪರೀತ ಮಳೆಯಾಗುತ್ತಿದೆ. ಇದರಿಂದ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ನಿಟ್ಟಿನಲ್ಲಿ ರಾಜಸ್ತಾನದಲ್ಲಿ ಸೋಯಾಬಿನ್ ಸೇರಿದಂತೆ ಹಲವು ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದ್ದು, ೨೫ ಸಾವಿರ ರೈತರನ್ನು ಸಂಘಟಿಸಿ ಹೋರಾಟ ನಡೆಸಿದ ಪರಿಣಾಮ ಅಲ್ಲಿನ ಸರ್ಕಾರ ಪರಿಹಾರ ನೀಡಲು ಒಪ್ಪಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕುಂಭಮೇಳಕ್ಕೆ ೧೦ ಸಾವಿರ ರೈತರ ಭೂಮಿಯನ್ನು ಶಾಶ್ವತವಾಗಿ ವಶಪಡಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿತ್ತು. ೧ ಸಾವಿರ ಟ್ರ್ಯಾಕ್ಟರ್‌ಗಳೊಂದಿಗೆ ಸಾವಿರಾರು ರೈತರು ಹೋರಾಟ ನಡೆಸಿದ ಪರಿಣಾಮ ೬ ತಿಂಗಳು ಕುಂಭಮೇಳ ನಡೆಸಿ ರೈತರಿಗೆ ಭೂಮಿ ಹಿಂದಿರುಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ವಿವರಿಸಿದರು.

ರೈತರ ಭೂಮಿಯನ್ನು ಕೊಡಲ್ಲ:

ಇನ್ನು ರಾಜ್ಯದ ಆನೇಕಲ್ ತಾಲ್ಲೂಕಿನ ೧೧ ಗ್ರಾಮಗಳಲ್ಲಿ ೨೫೩೫ ಎಕರೆ ಭೂಮಿಯನ್ನು ಸರ್ಕಾರ ಕಾನೂನಿಗೆ ವಿರುದ್ಧವಾಗಿ ಕಿತ್ತುಕೊಳ್ಳಲು ಹೊರಟಿರುವುದರ ವಿರುದ್ಧ ನಮ್ಮ ಸಂಘಟನೆಯ ನೇತೃತ್ವದಲ್ಲಿ ಕಳೆದ ೭೩ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಘಟನೆಯಿಂದ ಕಾನೂನು ಹೋರಾಟವನ್ನೂ ನಡೆಸಿದ್ದೇವೆ. ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದರು.

ದೆಹಲಿಯಲ್ಲಿ ರೈತ ಹೋರಾಟದ ಸಂದರ್ಭದಲ್ಲಿ ಹಸಿರು ಟವಲ್‌ನ್ನು ರಾಜಕಾರಣಿಗಳು ಬಳಸಿ ಅದಕ್ಕೆ ರಾಜಕೀಯದ ಸ್ವರೂಪ ನೀಡಿದ್ದಾರೆ. ಆದ್ದರಿಂದ ದೇಶಾದ್ಯಂತ ಭಾರತೀಯ ಕಿಸಾನ್ ಸಂಘದ ಕಾರ‌್ಯಕರ್ತರು ಹಸಿರು ಟವಲ್ ಹಾಕದಂತೆ ರಾಷ್ಟ್ರ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಇಲ್ಲಿನ ಹೋರಾಟಗಾರರು ಕಾಲಾವಕಾಶ ಕೇಳಿದ ಹಿನ್ನೆಲೆ ಇನ್ನೂ ಹಸಿರು ಟವಲ್ ಧರಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬಂತೆ ದೇಶದ ಅಸ್ಥಿತ್ವವನ್ನು ಪ್ರಶ್ನಿಸಲು ಮುಂದಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಪ್ರಧಾನಿ ಮೋದಿ ಪ್ರತಿರೋಧದ ಹೆಜ್ಜೆಯಿಟ್ಟಿರುವುದು ಸ್ವಾಗತಾರ್ಹ. ನಮ್ಮ ದೇಶ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತದೆ. ಇದೀಗ ಅಮೆರಿಕಾ ಅಧ್ಯಕ್ಷನಿಗೆ ಮನಃಪರಿವರ್ತನೆಯಾದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು, ಪ್ರಧಾನ ಕಾರ್ಯದರ್ಶಿ ಪಿ.ಎಲ್.ಸೋಮಶೇಖರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ವೆಂಕಟೇಶ್, ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ಜಿಲ್ಲಾ ಕಾರ್ಯಕಾರಣಿ ಸದಸ್ಯ ದುರ್ಗೇಶ್ ಹಾಜರಿದ್ದರು.