ಸಾರಾಂಶ
41000 ಜನರ ಖಾತೆಗೆ ಹಣ ಜಮೆಯಾದ ಪ್ರಕರಣ. ಯುಕೋ ಬ್ಯಾಂಕ್‌ನ ಇಬ್ಬರು ಎಂಜಿನಿಯರ್ ಕೈವಾಡ?
ನವದೆಹಲಿ: ಖಾಸಗಿ ಬ್ಯಾಂಕೊಂದರ 14 ಸಾವಿರ ಜನರ ಖಾತೆಯಿಂದ ಯುಕೋ ಬ್ಯಾಂಕ್‌ನ 41 ಸಾವಿರ ಜನರ ಖಾತೆಗೆ 820 ಕೋಟಿ ರು. ಹಣ ‘ಅಚ್ಚರಿ ಹಾಗೂ ಶಂಕಾಸ್ಪದ ರೀತಿಯಲ್ಲಿ’ ವರ್ಗ ಆದ ಪ್ರಕರಣದ ಸಂಬಂಧ ಮಂಗಳೂರು, ಕೋಲ್ಕತಾ ಸೇರಿದಂತೆ ದೇಶದ 13 ಸ್ಥಳಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿದೆ.
ಈ ವ್ಯವಹಾರದಲ್ಲಿ ಯುಕೋ ಬ್ಯಾಂಕ್‌ನ ಇಬ್ಬರು ಎಂಜಿನಿಯರ್‌ಗಳು ಶಾಮೀಲಾದ ಶಂಕೆ ಇದೆ. ಹೀಗಾಗಿ ಖುದ್ದು ಯುಕೋ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಸಿಬಿಐ ಎಫ್ಐಆರ್ ದಾಖಲಿಸಿಕೊಂಡು ದಾಳಿ ಮಾಡಿದೆ. ದಾಳಿ ವೇಳೆ ಕಂಪ್ಯೂಟರ್, ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್, ಲ್ಯಾಪ್‌ಟಾಪ್, ಇ-ಮೇಲ್ ಆರ್ಕೈವ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.ಏನಿದು ವ್ಯವಹಾರ?:
ಕಳೆದ ನ.10-13ರ ಅವಧಿಯಲ್ಲಿ ಅನ್ಯ ಖಾಸಗಿ ಬ್ಯಾಂಕ್‌ನ 14 ಸಾವಿರ ಜನರ ಖಾತೆಯಿಂದ 820 ಕೋಟಿ ರು. ಹಣ ಅಚಾನಕ್ಕಾಗಿ 8.53 ಲಕ್ಷ ಐಎಂಪಿಎಸ್ ಟ್ರಾನ್ಸ್‌ಫರ್ ವಿಧಾನದ ಮೂಲಕ ಯುಕೋ ಬ್ಯಾಂಕ್ ಖಾತೆದಾರರಿಗೆ ಬಂದಿದೆ. ತಮಗೆ ಸಂಬಂಧಪಡದ ಹಣ ಇದಾಗಿದ್ದರೂ ಯುಕೋ ಬ್ಯಾಂಕ್‌ನ ಕೆಲ ಗ್ರಾಹಕರು ಹಣ ವಿತ್‌ಡ್ರಾ ಮಾಡಿ ಬಳಸಿಕೊಂಡಿದ್ದಾರೆ. ಆದರೆ ಅನ್ಯ ಬ್ಯಾಂಕ್‌ನ 14 ಸಾವಿರ ಜನರ ಖಾತೆಯಲ್ಲಿ ಈ ಹಣವು ಕಡಿತವೇ ಆಗಿಲ್ಲ. ಬದಲಾಗಿ ‘ಐಎಂಪಿಎಸ್ ಟ್ರಾನ್ಸಾಕ್ಷನ್ ಫೇಲ್ಡ್’ ಎಂಬ ಸಂದೇಶ ಬಂದಿದೆ. ಹೀಗಾಗಿ ಇಡೀ ವ್ಯವಹಾರವೇ ಶಂಕಾಸ್ಪದವಾಗಿದೆ.ಈ ಸಂಬಂಧ ಖುದ್ದು ಯುಕೋ ಬ್ಯಾಂಕ್, ತನ್ನ ಇಬ್ಬರು ಎಂಜಿನಿಯರ್‌ಗಳ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅವರ ಮೇಲೆ ಹಾಗೂ ಅವರಿಗೆ ಸಂಬಂಧಿಸಿದ ಅನಾಮಧೇಯರ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅಲ್ಲದೆ, ಮಂಗಳೂರು ಹಾಗೂ ಕೋಲ್ಕತಾದ 13 ಸ್ಥಳಗಳ ಮೇಲೆ ದಾಳಿ ನಡೆಸಿದೆ.