ಕಂಪ್ಲಿ: ಬಸವಣ್ಣ ಮತ್ತು ಬಸವಾದಿ ಶಿವಶರಣರ ತತ್ವ-ಸಿದ್ಧಾಂತಗಳು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ವಿಶ್ವಮಾನ್ಯ ಸಂದೇಶಗಳಾಗಿದ್ದು, ಸಮಾನತೆ, ಶ್ರಮ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಹೇಳಿದರು.
ಪಟ್ಟಣದ ಶಿವಶಕ್ತಿ ಅಕ್ಕಿಗಿರಣಿ ಆವರಣದಲ್ಲಿ ರಾಷ್ಟ್ರಿಯ ಬಸವದಳ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಸಂಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಸವಣ್ಣರು ಸಮಾಜದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೂಢನಂಬಿಕೆ ಹಾಗೂ ಅಜ್ಞಾನವನ್ನು ನಿರ್ಮೂಲನೆ ಮಾಡಲು ತಮ್ಮ ಬದುಕನ್ನೇ ಸಮರ್ಪಿಸಿದ್ದರು. ಅವರ ತತ್ವಗಳು ಕಾಲಾತೀತವಾಗಿದ್ದು, ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಇಂತಹ ಮಹಾನ್ ಚಿಂತನೆಗಳಿಗೆ ವಿರುದ್ಧವಾಗಿ ಕೆಲವರು ಬಸವಾದಿ ಶಿವಶರಣರ ವಿಚಾರಧಾರೆಗೆ ಕಳಂಕ ತರುವ ಪ್ರಯತ್ನ ನಡೆಸುತ್ತಿರುವುದು ವಿಷಾದನೀಯ. ಬಸವ ತತ್ವವನ್ನು ಸಂಕುಚಿತ ದೃಷ್ಟಿಯಿಂದ ನೋಡುವುದಕ್ಕಿಂತ ಅದರ ವಿಶ್ವಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.ಹಿಂದೂ ಧರ್ಮದಲ್ಲಿದ್ದ ಮೂಢನಂಬಿಕೆ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಬಸವಾದಿ ಶಿವಶರಣರು ಧ್ವನಿ ಎತ್ತಿ ಹೊಸ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಅಂತಹ ಶರಣರ ವಿಚಾರಧಾರೆಯನ್ನು ಮತ್ತೆ ಹಿಂದಿನ ವ್ಯವಸ್ಥೆಗೆ ಎಳೆಯುವ ಪ್ರಯತ್ನಗಳು ಸಮಂಜಸವಲ್ಲ. ಬಸವ ಚಿಂತನೆ ವಿಶ್ವದಾದ್ಯಂತ ಗೌರವಕ್ಕೆ ಪಾತ್ರವಾಗಿದ್ದು, ಎಲ್ಲ ಕಾಲಕ್ಕೂ ಅನುಸರಿಸಬಹುದಾದ ಜೀವನ ಮೌಲ್ಯಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಉಪನ್ಯಾಸ ನೀಡಿದ ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಸುನಿಲ್ ಬಿ. ಅವರು, ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಜೀವನ ಸಾಧನೆ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ವಚನ ಪರಂಪರೆಯ ಸಂರಕ್ಷಣೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.ಅಂದಿನ ಕಾಲದಲ್ಲಿ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಪಾದಿಸಿ ಮುದ್ರಿಸುವ ಮೂಲಕ ಮುಂದಿನ ಪೀಳಿಗೆಗೆ ಅಮೂಲ್ಯವಾದ ಸಾಹಿತ್ಯ ಸಂಪತ್ತನ್ನು ಉಳಿಸಿಕೊಟ್ಟ ಮಹಾನ್ ಸಾಧಕ ಫ.ಗು. ಹಳಕಟ್ಟಿಯವರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಂ. ರುದ್ರಯ್ಯ, ಅಶೋಕ ಕುಕನೂರು, ಮಡಿವಾಳ ಹುಲುಗಪ್ಪ, ಆದಿಮನೆ ಹೊನ್ನಪ್ಪ, ಮಾ. ಶ್ರೀನಿವಾಸ, ಮರಿಶೆಟ್ರು ಸುರೇಶ್, ಕೆ.ಎಂ. ಚನ್ನಬಸವ, ಅಂಬಿಗರ ಮಂಜುನಾಥ, ಎಂ.ವಿ. ಬನ್ನಿಕೊಪ್ಪ, ಬಂಗಿ ದೊಡ್ಡ ಮಂಜುನಾಥ ಸೇರಿದಂತೆ ಬಸವದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.