ಸಮಸಮಾಜ ನಿರ್ಮಾತೃ ಮಹಾನ್ ಪುರುಷ ಬಸವಣ್ಣ

| Published : May 01 2025, 12:47 AM IST

ಸಮಸಮಾಜ ನಿರ್ಮಾತೃ ಮಹಾನ್ ಪುರುಷ ಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ತೋರಿಸಿಕೊಟ್ಟ ದಾರಿಯಲ್ಲಿ ನಾವು ಸಾಗಿದರೆ ನಮ್ಮ ಜೀವನಕ್ಕೆ ಒಂದು ಗೌರವ ಬರುತ್ತದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಾತಿರಹಿತ, ವರ್ಣರಹಿತ ಹಾಗೂ ಮೇಲು-ಕೀಳೆಂಬುದನ್ನಿ ಕಿತ್ತೆಸೆದು ಸಮಸಮಾಜ ನಿರ್ಮಿಸಿದ ಮಹಾನ್ ಪುರುಷ ಬಸವಣ್ಣನವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಗೋವಾವೇಸ್‌ನಲ್ಲಿರುವ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಬುಧವಾರ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇವನಾರವ ಇವನಾರವ ಎಂದೆಣಿಸದೇ ಇವ ನಮ್ಮವ ಇವ ನಮ್ಮವ ಎಂದು ಬಸವಣ್ಣನವರು ತೋರಿಸಿದ ದಾರಿಯಲ್ಲಿ ನಾವು ಸಾಗಬೇಕು. ಬಸವಣ್ಣನವರ ತೋರಿಸಿಕೊಟ್ಟ ದಾರಿಯಲ್ಲಿ ನಾವು ಸಾಗಿದರೆ ನಮ್ಮ ಜೀವನಕ್ಕೆ ಒಂದು ಗೌರವ ಬರುತ್ತದೆ. ಬಸವಾದಿ ಶರಣರು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶರಣರು ಮಾಡಿದ ಹೋರಾಟದ ಫಲವೇ ನಾವು ಸುಖದ ಜೀವನ ನಡೆಸಲು ಸಾಧ್ಯವಾಗಿದೆ. ವಚನ ಸಾಹಿತ್ಯ ತಿಳಿದುಕೊಂಡು ಅವುಗಳ ಸಾರಾಂಶ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಕೊಳಕು ತೊಳೆದು, ಅಂಕು ಡೊಂಕುಗಳನ್ನು ತಿದ್ದಿ ಉತ್ತಮ ಜೀವನ ನಡೆಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಸಾಹಿತಿ ಡಾ.ಬಸವರಾಜ ಜಗಜಂಪಿ ಉಪನ್ಯಾಸ ನೀಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ಎಂದು ತಿಳಿಸಿಕೊಟ್ಟ ಮಹಾನ್ ನಾಯಕ ಬಸವಣ್ಣನವರು. ಕೇವಲ ಒಂದು ಜಾತಿಗೆ, ಒಂದು ರಾಜ್ಯಕ್ಕೆ ಸೀಮಿತವಲ್ಲದ ವ್ಯಕ್ತಿ ಎಂದು ಬಣ್ಣಿಸಿದರು. ಕಾಯಕದ ನಾಯಕ ಬಸವಣ್ಣ, ಕನ್ನಡವನ್ನು ಉತ್ತಂಗಕ್ಕೇರಿಸಿದ ನಾಯಕ ಬಸವಣ್ಣ, ಭಾವೈಕೈದ ತುತ್ತ ತುದಿ ಮುಟ್ಟಿದ ಮಹಾನ್ ಮಾನವತಾವಾದಿ. ಸಕಲರಿಗೆ ಲೇಸನ್ನೆ ಬಯಸಿದ ಶರಣ ಬಸವಣ್ಣ, ಭಾರತದಲ್ಲಿ ಪ್ರಪ್ರಥಮವಾಗಿ ಮುಕ್ತ ವಿಚಾರ ಹೊಂದಿದ ವ್ಯಕ್ತಿ ಬಸವಣ್ಣನವರು; ಪ್ರಕೃತಿಯ ಅದ್ಭುತವಾದ ಸೃಷ್ಟಿ ಬಸವಣ್ಣ, ಪರಸ್ಪರ ನಾವು ತಿಳಿದು ಬದುಕಿದರೆ ಜೀವನ ಸುಖಕರಾವಾಗಿ ಸಾಗಲಿದೆ ಎಂದು ಬಸವಣ್ಣನವರು ಹೇಳಿದ್ದಾರೆ. ಅದರಂತೆ ನಾವು ಪರಸ್ಪರ ಅರಿತು‌ ಬಾಳಬೇಕಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಉದಯಕುಮಾರ್ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರತ್ನಪ್ರಭಾ ಬೆಲ್ಲದ, ಬಸವರಾಜ ರೊಟ್ಟಿ, ಈರಣ್ಣ ದಯನ್ನವರ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ:

ಇದಕ್ಕೂ ಮುಂಚೆ ಬಸವೇಶ್ವರ ಉದ್ಯಾನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮೇಯರ್ ಮಂಗೇಶ್ ಪವಾರ್, ಉಪ ಮೇಯರ್ ವಾಣಿ ವಿಲಾಸ್ ಜೋಶಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಸೇರಿ ಸಮಾಜದ ಗಣ್ಯರು ಮಾಲಾರ್ಪಣೆ ಮಾಡಿದರು.