ಸಾರಾಂಶ
ಮೂಢನಂಬಿಕೆ, ವರ್ಣಬೇಧ, ಮಡಿ ಮೈಲಿಗೆಯಿಂದ ತುಂಬಿದ್ದ ಸಮಾಜದ ನಡುವೆ ಬಸವಣ್ಣನವರ ವಚನಗಳು ಜೀವನ ಮತ್ತು ದೇವರನ್ನು ವಿಭಿನ್ನವಾಗಿ ನೋಡುವ ದೃಷ್ಟಿ ನೀಡಿದವು. ಜಾತಿರಹಿತ ಸಮಾಜದ ಕನಸು ಕಂಡ ಬಸವಣ್ಣನವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏಳ್ಗೆ ಪಡೆಯಲು ಸಮಾನ ಅವಕಾಶ ಬೇಕೆಂದು ಬಯಸಿದರು.
ಕೊಪ್ಪಳ:
೧೨ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾನ್ಯ ಜನರಿಗೆ ಸರಳವಾಗಿ ಹೃದಯಕ್ಕೆ ತಟ್ಟುವ ಹಾಗೇ ತತ್ವ-ಸಂದೇಶ ಸಾರಿದ ಬಸವಣ್ಣನವರು ನಿಜವಾದ ಸಮಾಜ ಸುಧಾರಕ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಭಿಪ್ರಾಯಪಟ್ಟರು.ಇಲ್ಲಿನ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 892ನೇ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಮೂಢನಂಬಿಕೆ, ವರ್ಣಬೇಧ, ಮಡಿ ಮೈಲಿಗೆಯಿಂದ ತುಂಬಿದ್ದ ಸಮಾಜದ ನಡುವೆ ಬಸವಣ್ಣನವರ ವಚನಗಳು ಜೀವನ ಮತ್ತು ದೇವರನ್ನು ವಿಭಿನ್ನವಾಗಿ ನೋಡುವ ದೃಷ್ಟಿ ನೀಡಿದವು. ಜಾತಿರಹಿತ ಸಮಾಜದ ಕನಸು ಕಂಡ ಬಸವಣ್ಣನವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏಳ್ಗೆ ಪಡೆಯಲು ಸಮಾನ ಅವಕಾಶ ಬೇಕೆಂದು ಬಯಸಿದರು. ತಮ್ಮೆಲ್ಲ ಈ ದೂರದೃಷ್ಟಿಯ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪ ಹುಟ್ಟು ಹಾಕಿದರು. ಕಾಯಕವೇ ಕೈಲಾಸ ಎಂದು ಸಾರಿ, ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಹುಮ್ಮಸ್ಸು ತುಂಬಿದರು. ''''ವಸುದೈವ ಕುಟುಂಬಕಂ ಎನ್ನುತ್ತಾ ಎಲ್ಲರಲ್ಲೂ ಸಹೋದರತ್ವದ ಭಾವನೆ ಸಾರಿದರು ಎಂದರು.ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಬಸವಣ್ಣನವರು ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿ. ವಚನಗಳ ಮೂಲಕ ಅವರು ಸಾಮಾಜಿಕ ಜಾಗೃತಿ ಮೂಡಿಸಿದರು. ಜಾತಿ, ಬಣ್ಣ ಮತ್ತು ಆರ್ಥಿಕ ಸ್ಥಾನಮಾನದ ಹೊರತಾಗಿಯೂ ಎಲ್ಲರೂ ಸಮಾನರು, ಸಾಮರಸ್ಯ, ಸಾಮಾಜಿಕ ನ್ಯಾಯ, ಕೆಲಸದ ಮೇಲಿನ ಭಕ್ತಿಯ ಸಂದೇಶ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.