ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯಲಿ ಎಂಬ ಆಶಯ ಹೊಂದಿರುತ್ತಾರೆ. ಆದರೆ ಸೈನಿಕರಾಗುವುದು ಕೇವಲ ಸರ್ಕಾರಿ ನೌಕರಿಯಲ್ಲ, ಅದು ರಾಷ್ಟ್ರಸೇವೆಯ ಅತ್ಯುನ್ನತ ರೂಪವಾಗಿದೆ ಎಂದು ಬಿ.ಎ.ಎಸ್. ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಮಹಾಂತಗೌಡ ಬಿರಾದಾರ ಹೇಳಿದರು.

ತಾಲೂಕಿನ ಹಡಲಗೇರಿ ವ್ಯಾಪ್ತಿಯ ಬಿ.ಎ.ಎಸ್. ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ದೇಶದ ಗಡಿಯಲ್ಲಿ ಸೈನಿಕರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪರಿಣಾಮ ದೇಶದ ನಾಗರಿಕರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶದ ಭದ್ರತೆಗಾಗಿ ಶ್ರಮಿಸುವ ಸೈನಿಕರಿಗೆ ನಾವು ಎಷ್ಟೇ ಗೌರವ ಸಲ್ಲಿಸಿದರೂ ಕಡಿಮೆಯೇ. ಸೈನಿಕರ ತ್ಯಾಗ ಮತ್ತು ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಕಾರ್ಗಿಲ್‌ ಕದನದಲ್ಲಿ ಭಾರತೀಯ ಯೋಧರು ತೋರಿಸಿದ ಶೌರ್ಯ, ಸಾಹಸ ವರ್ಣಿಸಲಸಾಧ್ಯ. ಬೆಟ್ಟದ ಮೇಲೆ ಕುಳಿತ ಪಾಕ್‌ ಸೈನಿಕರನ್ನು ದಿಟ್ಟತನದಿಂದ ಎದುರಿಸಿ ಭಾರತದ ಭೂಮಿಯಿಂದ ಹಿಮ್ಮೆಟ್ಟಿಸಿ ತ್ರಿವರ್ಣ ಧ್ವಜ ಹಾರಿಸಿದರುಎಂದು ಹೇಳಿದರು.ನಿವೃತ್ತ ಕರ್ನಲ್ ಶಿವಾನಂದ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯಮತ್ತು ಭದ್ರತೆಗಾಗಿ ಅನೇಕ ದೇಶಭಕ್ತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಗಡಿ ಕಾಯುವುದು ಅತ್ಯಂತ ಪುಣ್ಯದ ಕಾರ್ಯ. ಪ್ರತಿಯೊಂದು ಕುಟುಂಬದಿಂದ ಒಬ್ಬರಾದರೂ ಸೈನಿಕರಾಗಿ ದೇಶಸೇವೆ ಮಾಡಬೇಕು. ಇದರಿಂದ ದೇಶ ಮತ್ತಷ್ಟು ಸದೃಢವಾಗುತ್ತದೆ ಎಂದು ಹೇಳಿದರು.

ಬಿ.ಎ.ಎಸ್. ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ದಿವಸ್‌ ಆಧರಿಸಿ ನೀಡಿದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೇಶಭಕ್ತಿಯ ಭಾವನೆ ಮೂಡಿಸಿದವು. ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯ ದಿವಸ್‌ ಮಹತ್ವ ಕುರಿತು ಭಾಷಣ ನಡೆದವು.

ಶಿಕ್ಷಕ ಸಂಗಪ್ಪ ಬಿರಾದಾರ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸುಮಂಗಲ ಬಿರಾದಾರ, ನಿರ್ದೇಶಕಿ ಗೀತಾ ಬಿರಾದಾರ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಪ್ರಾಚಾರ್ಯ ಅಶೋಕ ತುಪ್ಪದ, ಸತೀಶ ವಾಲಿಕಾರ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಂಗೀತ ಶಿಕ್ಷಕರು ಸ್ವಾಗತಿಸಿದರು. ರಾಜ್ಮಾ ಕಂದಗಲ ನಿರೂಪಿಸಿದರು. ವಿದ್ಯಾರ್ಥಿನಿಯರು ವಂದಿಸಿದರು.