ಕನ್ನಡಪ್ರಭ ವಾರ್ತೆ ಬೆಳಗಾವಿ
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ಮತ್ತು ಕೃಷಿ ಕ್ಷೇತ್ರದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ರೈತರು ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೆಎಲ್‌ಇ ಕಾಹೆರ್ ಕುಲಾಧಿಪತಿ, ಪದ್ಮಶ್ರೀ ಡಾ.ಪ್ರಭಾಕರ ಕೋರೆ ಸಲಹೆ ನೀಡಿದರು.ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಶಿವಶಕ್ತಿ ಶುಗರ್ಸ್‌ನಿಂದ ಸೋಮವಾರ ಆಯೋಜಿಸಿದ್ದ ರೈತ ಸಮಾಲೋಚನಾ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಕೃಷಿಯಲ್ಲಿ ಹೊಸ ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರ ರೈತರ ನೆರವಿಗೆ ಸದಾ ಸಿದ್ಧವಿದೆ. ಬೆಳೆ ನಿರ್ವಹಣೆ, ಮಣ್ಣಿನ ಪರೀಕ್ಷೆ, ಆಧುನಿಕ ಕೃಷಿ ತಂತ್ರಜ್ಞಾನ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗಾಗಿ ಸಾಕಷ್ಟು ಪರಿಶ್ರಮ ವಹಿಸಲಾಗಿದೆ. ಇದರಿಂದ ಕೃಷಿ ಉತ್ಪಾದನೆ ಮತ್ತು ಆದಾಯದಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗಾಗಿ ಕೇಂದ್ರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ರೈತರ ನೆರವಿಗೆ ತಾವು ಸದಾ ಸಿದ್ಧ ಎಂದು ಭರವಸೆ ನೀಡಿದರು.
ಕೇವಲ ಕಬ್ಬು ಬೆಳೆಯನ್ನೇ ಅವಲಂಬಿಸುವುದು ರೈತರಿಗೆ ಸೂಕ್ತವಲ್ಲ. ಮಿಶ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ಆದಾಯದಲ್ಲಿ ಸ್ಥಿರತೆ ಸಾಧಿಸುವುದರ ಜತೆಗೆ ಪ್ರಕೃತಿ ವೈಪರೀತ್ಯದಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಕಬ್ಬಿನೊಂದಿಗೆ ಹಣ್ಣು, ತರಕಾರಿ, ಕಾಳು ಬೆಳೆಗಳು ಹಾಗೂ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೂ ಕೆಎಲ್‌ಇ ಸಂಸ್ಥೆ ಹೆಚ್ಚಿನ ಮಹತ್ವ ನೀಡುತ್ತಿದೆ. ತೆನಿಕೊಳ್ಳದಲ್ಲಿ ಬಿ.ಎಸ್ಸಿ ಕೃಷಿ ಮಹಾವಿದ್ಯಾಲಯ ಆರಂಭಿಸಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೃಷಿ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಶಿಕ್ಷಣದ ವಿಸ್ತರಣೆಗಾಗಿ ಇನ್ನಷ್ಟು ಕೃಷಿ ಮಹಾವಿದ್ಯಾಲಯಗಳನ್ನು ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಾರೂಗೇರಿ ಪ್ರಮುಖ ರೈತರಾದ ಜಿನ್ನಪ್ಪ ಅಸ್ಕಿ, ಭೀಮಪ್ಪ ಬದನೆಕಾಯಿ, ನೇಮಣ್ಣ ನಾಣಾವಿ, ಬಸನಗೌಡ ಆಸಂಗಿ, ಸಿದ್ದಪ್ಪ ನಾಗನೂರು, ಶ್ರೀಧರ ಸದಲಗಿ ಸೇರಿದಂತೆ ಅನೇಕ ರೈತರು, ಶಿವಶಕ್ತಿ ಶುಗರ್ಸ್‌ನ ಅಧಿಕಾರಿಗಳು, ಕೃಷಿ ತಜ್ಞರು ಉಪಸ್ಥಿತರಿದ್ದರು.