ಬೇಂದ್ರೆಯವರು ಸಾಮರಸ್ಯದ ಕವಿಯಾಗಿದ್ದರು- ಶಾಂತಲಿಂಗ ಶ್ರೀಗಳು

| Published : Feb 05 2024, 01:55 AM IST

ಬೇಂದ್ರೆಯವರು ಸಾಮರಸ್ಯದ ಕವಿಯಾಗಿದ್ದರು- ಶಾಂತಲಿಂಗ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೇಂದ್ರೆಯವರು ಸಾಹಿತ್ಯದ ಮೂಲಕ ಸಾಮಾಜಿಕ ಸಮನ್ವಯತೆಯ ಪರಿಕಲ್ಪನೆಯನ್ನು ನೀಡಿದ ಸಾಮರಸ್ಯದ ಕವಿಯಾಗಿದ್ದಾರೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ನರಗುಂದ: ಬೇಂದ್ರೆಯವರು ಸಾಹಿತ್ಯದ ಮೂಲಕ ಸಾಮಾಜಿಕ ಸಮನ್ವಯತೆಯ ಪರಿಕಲ್ಪನೆಯನ್ನು ನೀಡಿದ ಸಾಮರಸ್ಯದ ಕವಿಯಾಗಿದ್ದಾರೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವರಕವಿ ಡಾ.ದ.ರಾ. ಬೇಂದ್ರೆಯವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಂದ್ರೆ ನರಬಲಿ ಕವನದ ಮೂಲಕ ಸ್ವಾತಂತ್ರ್ಯ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಚಳವಳಿಗೆ ಪುಷ್ಟಿಕೊಟ್ಟರು, ತತ್ಪರಿಣಾಮವಾಗಿ ಬ್ರಿಟಿಷರ ಕೋಪಕ್ಕೆ ಬಲಿಯಾಗಿ ಜೈಲುವಾಸ ಅನುಭವಿಸಿದರು. ಬೇಂದ್ರೆಯವರು ಕಷ್ಟಗಳ ಕುಲುಮೆಯಲ್ಲಿ ಬೆಂದು ಅರಳಿನಿಂತ ಅಪೂರ್ವ ಪ್ರತಿಭೆ, ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ರಚಿಸಿದ ಅವರ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ ಎಂದರು.

ಕಿತ್ತು ತಿನ್ನುವ ಬಡತನದಲ್ಲಿಯೂ ಸಾಧನೆಯ ಶಿಖರವನ್ನೇರಿದ ಬೇಂದ್ರೆಯವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳನ್ನು ಸಾಹಿತ್ಯದ ಮೂಲಕ ಹೊರಹಾಕಿದ್ದಾರೆ. ಅವರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಬೇಂದ್ರೆಯವರ ಸಾಹಿತ್ಯವನ್ನು ಪ್ರತಿಯೊಬ್ಬರು ಓದಲೇಬೇಕು. ಸಾಧನಕೇರಿಯ ಪರಿಸರ ಬೇಂದ್ರೆಯವರ ಸಾಧನೆಯಿಂದ ಸಾಧನೆಕೇರಿಯಾಗಿದೆ. ಹೀಗಾಗಿ ಅವರು ಕನ್ನಡ ಸಾಹಿತ್ಯ ಲೋಕದ ಮಿನುಗುತಾರೆ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಬೇಂದ್ರೆಯವರ ಮಾತೃಭಾಷೆ ಮರಾಠಿಯಾಗಿದ್ದರೂ ನಿರೀಕ್ಷೆಗೂ ಮೀರಿ ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಸಾಮಾನ್ಯರ ಜನಜೀವನವನ್ನು ಅವರ ನೋವು-ನಲಿವುಗಳನ್ನು, ಮಿಡಿತ-ತುಡಿತಗಳನ್ನು ಕವನಗಳಲ್ಲಿ ಮೂಡಿಸಿದ ಮಹತ್ವದ ಕವಿಗಳಲ್ಲಿ ಬೇಂದ್ರೆ ಅಗ್ರಗಣ್ಯರು. ಪ್ರಕೃತಿ, ಅಧ್ಯಾತ್ಮ, ಸಾಮಾಜಿಕ ಇವುಗಳ ಜೊತೆಗೆ ಶಾಂತಿ ಪ್ರೀತಿಗಳ ಬಗ್ಗೆ ತಮ್ಮ ಕವನಗಳ ಮೂಲಕ ಒತ್ತಿ ಹೇಳಿದರು.

ಇಂತಹ ಕವಿಗಳು, ಕವನಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಓದಬೇಕಾಗಿದೆ. ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯವನ್ನು ರಾಷ್ಟ್ರ ಮಟ್ಟದಲ್ಲಿ ಉತ್ತುಂಗಕ್ಕೇರಿಸಿದ ಕೀರ್ತಿ ಡಾ. ಬೇಂದ್ರೆಯವರಿಗೆ ಸಲ್ಲುತ್ತದೆ ಎಂದರು.

ಕೇತ್ರ ಸಮನ್ವಯಾಧಿಕಾರಿ ಬಿ.ಎಫ್. ಮಜ್ಜಗಿ, ಶಿಕ್ಷಣ ಇಲಾಖೆಯ ಎನ್. ಆರ್ .ನಿಡಗುಂದಿ ಹಾಗೂ ಶಿಕ್ಷಕರಾದ ಝೆಡ್.ಎಂ. ಖಾಜಿ, ಪಿ.ಸಿ. ಕಲಹಾಳ, ಎಸ್. ಜಿ. ಮಣ್ಣೂರಮಠ, ವೀರಭದ್ರಪ್ಪ ಅಣ್ಣಿಗೇರಿ, ಎಸ್ .ಎಲ್ .ಮರಿಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ವೀರಯ್ಯ ಸಾಲಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.