ಸಾರಾಂಶ
- - 3ನೇ ವರ್ಷದ ಮೈಸೂರು ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ
- ಶಾಸಕ ಜಿ.ಟಿ. ದೇವೇಗೌಡ----ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗುವ ಜೊತೆಗೆ ಒಂದಿಷ್ಟು ಆದಾಯ ಕಂಡುಕೊಳ್ಳಲು ಹೈನುಗಾರಿಕೆ ನೆರವಾಗಿದೆ. ರೈತರ ಪಾಲಿಗೆ ಹೈನುಗಾರಿಕೆ ಕಾಮಧೇನು ಆಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.ಟಿ. ನರಸೀಪುರ ತಾಲೂಕಿನ ಬನ್ನೂರು ಹಾಲು ಉತ್ಪಾದಕರ ಬಳಗದಿಂದ ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ. ಕೃಷ್ಣಪ್ಪ ಸ್ಮರಣಾರ್ಥ ಆಯೋಜಿಸಿದ್ದ 3ನೇ ವರ್ಷದ ಮೈಸೂರು ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 3 ವರ್ಷಗಳಿಂದ ನಿರಂತರವಾಗಿ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಬೇಕು ಎಂದರು.
ರೈತರ ಬದುಕು ಬರಗಾಲ ಬಂದರೆ ಸಂಪೂರ್ಣ ನಾಶವಾಗಲಿದೆ. ಹೆಚ್ಚು ಮಳೆ ಬಂದರೂ ಕಷ್ಟ. ಬರಗಾಲ ಬಂದರೂ ಕಷ್ಟವಾಗಲಿದೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿದವರಿಗೆ ಎರಡೂ ಸಂದರ್ಭ ಎದುರಾದರೂ ಹೆಚ್ಚಿನ ಅನಾನುಕೂಲವಾಗುವುದಿಲ್ಲ ಎಂದು ಅವರು ಹೇಳಿದರು.ಕರ್ನಾಟಕದಲ್ಲಿ ಪ್ರತಿದಿನ 85 ರಿಂದ 90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ದಿನಕ್ಕೆ 24 ಕೋಟಿ ರೂ. ಬಟಾವಡೆ ಮಾಡಿದರೆ, ಮೈಸೂರು ಜಿಲ್ಲೆಯಲ್ಲಿ ದಿನಕ್ಕೆ 7 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನಕ್ಕೆ ಎರಡೂವರೆ ಕೋಟಿ ರೂ. ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ. ತಿಂಗಳಿಗೆ 75 ಕೋಟಿ ರೂ. ನಂತೆ ಒಂದು ವರ್ಷದಲ್ಲಿ 900 ಕೋಟಿ ರೂ. ಹಾಲು ಉತ್ಪಾದಕರಿಗೆ ಸೇರುತ್ತಿದೆ. ಹೈನುಗಾರಿಕೆಯಿಂದ ಮಹಿಳೆಯರು ಆದಾಯವನ್ನು ಕಂಡುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಬಳಗದ ಅಧ್ಯಕ್ಷ ಬಿ.ಎನ್. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಉಮೇಶ್ ಕುಮಾರ್, ನಿರ್ದೇಶಕರಾದ ಎಂ. ಚಂದ್ರು, ಮಹೇಶ, ಶ್ರೀಧರ್, ರಘು, ವೆಂಕಟೇಶ್, ನಿಂಗಪ್ಪ, ಬಿ.ಎಸ್. ರಾಜೀವ, ಬಿ.ವಿ. ಉಮೇಶ, ಬಿ.ಕೆ. ಶೋಭಾ, ಸುಶೀಲ ಇದ್ದರು.----
ಬಾಕ್ಸ್...ಬಹುಮಾನ ವಿಜೇತರು
ಮೂರನೇ ವರ್ಷದ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೇಮಾದ್ರಿ ಆದಿಶಕ್ತಿ ಶ್ರೀಗೌರಿ ಮಂಜು(ಪ್ರಥಮ), ಕೇಶವಮೂರ್ತಿ(ದ್ವಿತೀಯ), ತರುಣ್ ಕುಮಾರ್ (ತೃತೀಯ), ರವಿ(4ನೇ) ಬಸವಣ್ಣ, ಧ್ರುವಕುಮಾರ್, ಸಿ. ಚಂದ್ರಶೇಖರ್, ಮಧು, ಟಿ.ಎಸ್. ಭುವನ್ ಅವರು ಸಮಾಧಾನಕರ ಬಹುಮಾನ ಪಡೆದರು.----
-- ಬಾಕ್ಸ್--ಜಮೀನು ಮಾರಾಟ ಮಾಡಬೇಡಿ- ಜಿಟಿಡಿ
ಇಂದು ರೈತರು ಕಡಿಮೆ ದರದಲ್ಲಿ ತಮ್ಮ ಜಮೀನುಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳಬೇಕು. ಐದು, ಹತ್ತು ಅಥವಾ 20 ಗುಂಟೆ ಜಮೀನು ಹೊಂದಿರುವವರು ಐದಾರು ಲಕ್ಷ ಜಾಸ್ತಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮಾರಾಟ ಮಾಡದೆ ತರಕಾರಿಗಳನ್ನು ಬೆಳೆಯಬೇಕು. ಕೃಷಿ ಚಟುವಟಿಕೆಯ ಜತೆಗೆ ಹೈನುಗಾರಿಕೆ, ಕುರಿ ಮೊದಲಾದ ಚಟುವಟಿಕೆ ಮಾಡಬೇಕು. ರೈತರು ತಮ್ಮ ಜಮೀನು ಮಾರಿ ಮುಂದೆ ಜೀವನ ಮಾಡುವುದಕ್ಕೆ ಕಷ್ಟವಾಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಸಿದರು.ಇಂದು ತಮ್ಮ ಮಕ್ಕಳಿಗೆ ಸರಳ ವಿವಾಹ ಮಾಡಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ನಾನು ನನ್ನ ಮಗ, ಮಗಳಿಗೆ ತಿರುಪತಿಗೆ ಕರೆದುಕೊಂಡು ಹೋಗಿ ಸರಳ ವಿವಾಹ ಮಾಡಿದೆ. ಜಮೀನು ಮಾರಾಟ ಮಾಡಿ ಅದ್ಧೂರಿ ಮದುವೆ ಮಾಡದೆ ಉಳಿಸಿಕೊಳ್ಳಬೇಕು. ಮಂತ್ರ ಮಾಂಗಲ್ಯಕ್ಕೆ ರೈತರು ಒತ್ತು ನೀಡಬೇಕು ಎಂದು ಅವರು ಕರೆ ನೀಡಿದರು.