ಕನ್ನಡಪ್ರಭ ವಾರ್ತೆ ಗೋಕಾಕ

ನಗರದ ಸಮೀಪದ ಲೋಳಸೂರ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ₹ 30.21 ಕೋಟಿ ವೆಚ್ಚದ ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ನೂತನ ಸೇತುವೆ ನಿರ್ಮಾಣದಿಂದ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮಳೆಗಾಲ, ಪ್ರವಾಹದಂತಹ ಸಂದರ್ಭಗಳಲ್ಲಿಯೂ ಇನ್ನು ಮುಂದೆ ಸರಳವಾಗಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಿರಿದಾದ ಸೇತುವೆ ಮತ್ತು 1964ರಲ್ಲಿ ನಿರ್ಮಾಣಗೊಂಡ ಪಕ್ಕದ ದೊಡ್ಡ ಸೇತುವೆಯ ಮಧ್ಯ ಹೊಸ ಸೇತುವೆ ತಲೆ ಎತ್ತಲಿದೆ. ಎರಡೂ ಸೇತುವೆಗಳಿಗೆ ಯಾವುದೇ ಹಾನಿಯಾಗದಂತೆ ಕಾಮಗಾರಿ ಕೈಕೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ನಂತರ ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಸೇತುವೆ ಕಾಮಗಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ಪರಿಶೀಲಿಸಿದರು. ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ತಿಳಿಸಿದರು.

ಮೊರಾರ್ಜಿ ಶಾಲೆಗೆ ಭೇಟಿ ನೀಡಿದ ಸಚಿವ: ಘಟಪ್ರಭಾದ ಮೊರಾರ್ಜಿ ಶಾಲೆಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಿದರು.


ಈ ವೇಳೆ ಶಾಲೆಯ ಮೂಲಸೌಕರ್ಯ, ವಸತಿ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಅಭ್ಯಾಸ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತರಾದ ಶಿವು ಪಾಟೀಲ್, ರಾಜು ದರಗಶೆಟ್ಟಿ, ಆರಿಪ್ ಪಿರಜಾದೆ ಸೇರಿದಂತೆ ಹಲವರಿದ್ದರು.