ಬಸವಕಲ್ಯಾಣ : ಖಾಸಗಿ ಉರ್ದು ಶಾಲಾ ಶಿಕ್ಷಕರಾಗಿದ್ದ ಇಬ್ಬರ ಮೇಲೆ ಐದಾರು ಅಪರಿಚಿತರು ಹಲ್ಲೆ ಮಾಡಿದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಪೊಲೀಸ್‌ ಠಾಣೆ ಎದುರು ಜಮಾಯಿಸಿ ಗದ್ದಲ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಈ ವೇಳೆ ಪೊಲೀಸರು ಮನವೊಲಿಕೆಗೆ ಯತ್ನಿಸಿದಾಗ ಅವರ ಮೇಲೆ ಕಲ್ಲು ತೂರಲಾಗಿದೆ. ಈ ವೇಳೆ ಎಎಸ್‌ಐ ಒಬ್ಬರಿಗೆ ಗುಂಪು ಥಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಅದನ್ನು ಬೀದರ್‌ ಪೊಲೀಸ್‌ ವರಿಷ್ಠಾಧಿಕಾರಿ ಖಚಿತಪಡಿಸಿಲ್ಲ.

ಮಂಗಳವಾರ ರಾತ್ರಿ 9.30ರ ಸುಮಾರಿಗೆ ನಗರದ ಯಾತ್ರಿ ನಿವಾಸದ ಬಳಿ ಇಬ್ಬರು ಖಾಸಗಿ ಶಾಲಾ ಶಿಕ್ಷಕರ ಮೇಲೆ ಸುಮಾರು 6 ಜನ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಹಲ್ಲೆಯ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. ರಾತ್ರೋರಾತ್ರಿ ಮುಸ್ಲಿಂ ಸಮುದಾಯದ 2-3 ಸಾವಿರ ಜನರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.


ಪೊಲೀಸ್‌ ಠಾಣೆಯ ಮುಂದೆ ಗುಂಪು ಸೇರಿದವರನ್ನು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಆಕ್ರೋಶದಲ್ಲಿದ್ದ ಜನರು ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿ, ಪೊಲೀಸ್ ವಾಲೋಕೋ ಚೋಡೋ ಮತ್ (ಪೊಲೀಸರನ್ನು ಬಿಡಬೇಡಿ) ಎಂದು ಪ್ರಚೋದಿಸಿದರು. ಅಲ್ಲದೆ ‘ಕಲ್ಲುಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಎಎಸ್‌ಐ ಮುಕ್ತಾರ ಪಟೇಲ ಅವರ ಹಣೆಯ ಮೇಲೆ ಮತ್ತು ಎದೆಯ ಕೆಳಭಾಗಕ್ಕೆ ಭಾರಿ ಪೆಟ್ಟು ಬಿದ್ದು, ಗಂಭೀರ ಗುಪ್ತಗಾಯಗಳಾಗಿವೆ. ಹೀಗಾಗಿ ಗುಂಪುಕಟ್ಟಿಕೊಂಡು ದೊಂಬಿಗೆ ಯತ್ನಿಸಿದ ಅಕಿಲ್, ಏಜಾಜ ಲಾತೂರೆ, ಬಿಲಾಲ ಸೇರಿದಂತೆ ಸುಮಾರು 49ಕ್ಕೂ ಹೆಚ್ಚು ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಎಸ್‌ಐ ಮುಕ್ತಾರ್‌ ಪಟೇಲ್‌ ಅವರು ನೀಡಿದ್ದಾರೆ’ ಎಂಬ ಅಂಶವುಳ್ಳ ಎಫ್‌ಐಆರ್‌ ಮಾದರಿ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಗಾಯಗೊಂಡ ಎಎಸ್‌ಐ ಮುಕ್ತಾರ ಪಟೇಲ ಅವರನ್ನು ತಕ್ಷಣವೇ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 49 ಆರೋಪಿಗಳು ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಕಲಂಗಳಲ್ಲಿ (U/s-118(1), 121(1), 190, 189(1), 189(2), 132, 191(2), 191(3), 351(2), 352) ಪ್ರಕರಣ ದಾಖಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಫ್‌ಐಆರ್‌ ಪ್ರತಿಯಲ್ಲಿ ಹೇಳಲಾಗಿದೆ.

ಈ ಕುರಿತಂತೆ ಎಸ್‌ಪಿ ಪ್ರದೀಪ ಗುಂಟಿ ಅವರು ‘ಕನ್ನಡಪ್ರಭ’ಕ್ಕೆ ಮಾತನಾಡಿ, ಪೊಲೀಸರ ಮೇಲೆ ಹಲ್ಲೆ ನಡೆದಿಲ್ಲ. ಪರಿಸ್ಥಿತಿ ಶಾಂತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಂದೋಬಸ್ತ್‌:

ಬುಧವಾರವೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿತ್ತು. ಘಟನೆಯಿಂದಾಗಿ ನಗರ ಹಾಗೂ ಪೊಲೀಸ್ ಠಾಣೆ ಸುತ್ತಮುತ್ತ ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ನಗರ ಸುತ್ತಮುತ್ತ ಆರು ಜಿಲ್ಲಾ ಮೀಸಲು ಪೊಲೀಸ್ ವಾಹನಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಬಸವಕಲ್ಯಾಣ ನಗರದಲ್ಲಿ ತಾತ್ಕಾಲಿಕವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ಪೊಲೀಸರ ಹರಸಾಹಸದಿಂದ ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಗಸ್ತು ವ್ಯವಸ್ಥೆ

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಗಸ್ತು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಭೇಟಿ ನೀಡಿ ಅಲ್ಲಿಯೇ ಬಿಡಾರ ಹೂಡಿದ್ದು ಪರಿಸ್ಥಿತಿ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.