ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ 3ನೇ ಬಾರಿಗೆ ಪೊಲೀಸ್ ಮ್ಯಾರಥಾನ್ ಓಟ-2026 ಅನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗದಲ್ಲಿ ಮಾ.1ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್ ಹೇಳಿದ್ದಾರೆ.

- ಪುರುಷರಿಗೆ 10 ಸಾವಿರ ಮೀಟರ್‌, ಮಹಿಳೆಯರಿಗೆ 5 ಸಾವಿರ ಮೀಟರ್ ಓಟದ ಸ್ಪರ್ಧೆ: ಎಸ್ಪಿ ಡಾ.ಶೇಖರ್ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ 3ನೇ ಬಾರಿಗೆ ಪೊಲೀಸ್ ಮ್ಯಾರಥಾನ್ ಓಟ-2026 ಅನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗದಲ್ಲಿ ಮಾ.1ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್ ಹೇಳಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಡ್ರಗ್ಸ್ ಮುಕ್ತ ದಾವಣಗೆರೆ, ಸೈಬರ್ ಸೇಫ್‌ ಸಿಟಿ, 112 ಸಹಾಯವಾಣಿ, ಸಂಚಾರ ನಿಯಮಗಳ ಕಡ್ಡಾಯ ಪಾಲನೆ, ಫಿಟ್‌ನೆಸ್ ಫಾರ್ ಆಲ್, ಮಹಿಳಾ ಸುರಕ್ಷತೆ ಅಭಿಯಾನ ಎಂಬ ಘೋಷಣೆಯಡಿ 3ನೇ ಬಾರಿಗೆ 10ಕೆ ಮ್ಯಾರಥಾನ್ ಹಾಗೂ 05ಕೆ ಮ್ಯಾರಥಾನ್ ಪೊಲೀಸರೊಂದಿಗೆ ಓಟ ನಡೆಯಲಿದೆ ಎಂದರು.

ಬೆಳಗ್ಗೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಮ್ಯಾರಥಾನ್‌ಗೆ ಚಾಲನೆ ನೀಡುವರು. ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿ, ಯುವ ಜನರು, ಪುರುಷ- ಮಹಿಳಾ ಕ್ರೀಡಾಪಟುಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬಹುದು. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಫೆ.28ರ ಮಧ್ಯಾಹ್ನ 3 ಗಂಟೆ ಒಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನಿಗದಿತ ಲಿಂಕ್ ಮೂಲಕನೇ ನೋಂದಣಿ ಮಾಡುವುದು ಕಡ್ಡಾಯ. ಹೆಸರು ನೋಂದಣಿಗೆ ** Link: https://forms.gle/UioaULc2hU9hkY3g8 ** ಅಥವಾ ಕ್ಯೂಆರ್ ಕೋಡ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯದ ದೃಷ್ಟಿಯಿಂದ ಸದೃಢರಾಗಿರುವವರು ಮಾತ್ರ ಪಾಲ್ಗೊಳ್ಳಬೇಕು. ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟಿರಬೇಕು. ಆರೋಗ್ಯದ ಸಮಸ್ಯೆಗಳನ್ನು ಹೊಂದಿರಬಾರದು. ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ಸ್ಪರ್ಧಿಗಳೇ ಜವಾಬ್ದಾರರು. ಪುರುಷರ 10 ಕಿಮೀ ಓಟದ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ ₹20 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ಸ್ಥಾನಕ್ಕೆ ₹5 ಸಾವಿರ ನಗದು ಬಹುಮಾನ ನೀಡಲಾಗುವುದು. 5 ಕಿಮೀ ಮಹಿಳಾ ವಿಜೇತರಿಗೆ ₹10 ಸಾವಿರ ರು., ದ್ವಿತೀಯ ₹5 ಸಾವಿರ, ತೃತೀಯಕ್ಕೆ ₹3 ಸಾವಿರ ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.

10 ಕಿಮೀ ಓಟವು ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ, ಡಾ.ಎಂ.ಸಿ.ಮೋದಿ ವೃತ್ತ, ಶಾಬನೂರು ರಸ್ತೆ, ಕ್ಲಾಕ್ ಟವರ್, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಶ್ರೀ ಜಯದೇವ ವೃತ್ತದ ಮಾರ್ಗವಾಗಿ ಸಾಗಿ ಜಿಲ್ಲಾ ಕ್ರೀಡಾಂಗಣ ತಲುಪಲಿದೆ. ಮಹಿಳೆಯರ 5 ಕಿಮೀ ಓಟವು ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆ, ಎಆರ್‌ಜಿ ಕಾಲೇಜು ರಸ್ತೆ, ಯುಬಿಡಿಟಿ ಕಾಲೇಜು ಬಳಿ ತಿರುವು ಪಡೆದು ಮೆಡಿಕಲ್ ಹಾಸ್ಟೆಲ್‌ ಮಾರ್ಗವಾಗಿ ಸಾಗಿ ಆಂಜನೇಯ ಬಡಾವಣೆ ಚಕ್ ದೇ ಹೋಟೆಲ್‌ ಪಕ್ಕದ ರಸ್ತೆ, ಥೀಮ್ ಪಾರ್ಕ್‌, ನೂತನ ಕಾಲೇಜು ರಸ್ತೆಗೆ ಸೇರಿ, ವಿದ್ಯಾ ನಗರ ಕಾಫಿ ಡೇ ಬಳಿ ಬಲಕ್ಕೆ ತಿರುವು ಪಡೆದು, ವಿದ್ಯಾ ನಗರ 2ನೇ ಬಸ್ಸು ನಿಲ್ದಾಣದ ಬಳಿ ಎಡಕ್ಕೆ ತಿರುಗಿ, ಹದಡಿ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಮರಳಬೇಕು ಎಂದು ಎಸ್‌ಪಿ ಡಾ.ಶೇಖರ್ ವಿವರಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಎಸ್.ಬಿ.ಐ ರೀಜನಲ್ ಮ್ಯಾನೇಜರ್ ಮಾನವಕುಮಾರ್, ಮುಖ್ಯ ವ್ಯವಸ್ಥಾಪಕ ಕೆ.ಸುರೇಶ್, ಡಿವೈಎಸ್ಪಿಗಳಾದ ರುದ್ರಪ್ಪ ಉಜ್ಜಿನಿಕೊಪ್ಪ, ಪಿ.ಬಿ.ಪ್ರಕಾಶ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಇದ್ದರು.

- - -

-27ಕೆಡಿವಿಜಿ8:

ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಮ್ಯಾರಥಾನ್ ಓಟದ ಸ್ಪರ್ಧೆಯ ಟಿ ಶರ್ಟ್‌ಗಳನ್ನು ಎಸ್‌ಪಿ ಡಾ.ಎಚ್.ಟಿ.ಶೇಖರ್, ಎಎಸ್ಪಿ ಪರಮೇಶ್ವರ ಹೆಗಡೆ, ಎಸ್‌ಬಿಐ ವಲಯ ವ್ಯವಸ್ಥಾಪಕ ಮಾನವಕುಮಾರ ಬಿಡುಗಡೆ ಮಾಡಿದರು.